ಬೆಂಗಳೂರು: ಅವರವರ ಮಿತಿಯಲ್ಲಿ ಇರಬೇಕಿತ್ತು. ಅವರವರ ಮನೆ ವಿಚಾರಗಳನ್ನು ಸಾರ್ವಜನಿಕವಾಗಿ ಮಾತನಾಡುವ ಮುನ್ನ ಅವರು ಯಾವ ಸ್ಥಾನದಲ್ಲಿ ಇದ್ದಾರೆ ಎಂಬುದನ್ನು ಆಲೋಚನೆ ಮಾಡಬೇಕಿತ್ತು ಎಂದು ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತು ಐಎಎಸ್ ರೋಹಿಣಿ ಸಿಂಧೂರಿ ನಡುವಿನ ಗಲಾಟೆ ವಿಚಾರವಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಇದು ಅವರ ವೈಯಕ್ತಿಕ ವಿಚಾರ ಅಂತಾ ನಾವು ಸುಮ್ಮನಿದ್ದೆವು. ಇದು ಹೀಗೆ ಮುಂದುವರೆದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಿಧಾನಸೌಧದವರೆಗೂ ಬಂದು ಮುಂದುವರಿಯುತ್ತೆ ಅಂದ್ರೆ ಸುಮ್ನಿರಲು ಆಗಲ್ಲ ಎಂದು ತಿಳಿಸಿದರು.
ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಕಾನೂನಿನಡಿ ಏನು ಕ್ರಮ ತಗೋಬಹುದು ನೋಡ್ತೀವಿ. ಸರ್ಕಾರ ಬೇರೆ ರೀತಿ ಆಲೋಚನೆ ಮಾಡಬೇಕಾಗುತ್ತದೆ. ಏನೇನು ಆಗಿದೆ ಎಂದು ನೋಡಿ, ಶಿಸ್ತಿನ ಪಾಲನೆ ಆಗುವ ರೀತಿ ನೋಡಿಕೊಳ್ಳುತ್ತೇವೆ. ಅವರವರ ಮಿತಿಯಲ್ಲಿ ಇರಬೇಕಿತ್ತು. ವಿಧಾನಸೌಧದಲ್ಲಿ ಗಲಾಟೆ ಆಗುತ್ತೆ ಎಂದರೇ ನೋಡ್ತೇವೆ. ಏನೇನು ಆಗಿದೆ ಎಂದು ನೋಡಿ, ಶಿಸ್ತಿನ ಪಾಲನೆ ಆಗುವ ರೀತಿ ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ದೂರು: ಇನ್ನು, ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮಾಡಿರುವ ಆರೋಪಗಳ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದೂರು ದಾಖಲಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ(ಸಿಎಸ್) ವಂದಿತಾ ಶರ್ಮಾ ಅವರಿಗೆ ಇಂದು ನಾಲ್ಕು ಪುಟಗಳ ದೂರು ಸಲ್ಲಿಸಿದ ಸಿಂಧೂರಿ, ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೇ ತಮ್ಮ ವಿರುದ್ಧ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಆಧಾರರಹಿತ, ವೈಯಕ್ತಿಕ ಮತ್ತು ಸುಳ್ಳು ಆರೋಪಗಳನ್ನು ಮಾಡಿ ಸೇವಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆ ರೂಪಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ದೂರಿನಲ್ಲಿ ರೂಪಾ ಮೌದ್ಗಿಲ್ ಸಾಮಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಮಾಡಿರುವ ಆರೋಪದ ಲಿಂಕ್ಗಳನ್ನು ಲಗತ್ತಿಸಿದ್ದಾರೆ.
ಸರ್ಕಾರಿ ಅಧಿಕಾರಿ ವಿರುದ್ಧ, ಮತ್ತೊಬ್ಬ ಅಧಿಕಾರಿ ದೂರು ನೀಡಬೇಕಾದರೆ, ಸೂಕ್ತ ವೇದಿಕೆ ಇದೆ. ಆದರೆ ನೇರವಾಗಿ ಮಾಧ್ಯಮದ ಮುಂದೆ ವ್ಯಕ್ತಿಗತವಾಗಿ ನಿಂದನೆ ಮಾಡುವುದು ಸರಿಯಲ್ಲ. ರೂಪಾ ಮೌದ್ಗಿಲ್ ನನ್ನ ವಿರುದ್ಧ 20 ಆರೋಪಗಳನ್ನು ಮಾಡಿದ್ದಾರೆ. 2020ರಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಕ್ಕೆ ರೂಪಾ ನನ್ನ ವಿರುದ್ಧ ಆರೋಪಿಸಿದ್ದಾರೆ.
ಹೈಕೋರ್ಟ್ ನೇಮಿಸಿದ ಸಮಿತಿ ಹಾಗೂ ರಾಜ್ಯ ಸರ್ಕಾರ ಆಯೋಗ ಈ ಘಟನೆಯಲ್ಲಿ ತನ್ನ ಯಾವ ಪಾತ್ರವೂ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿತು. ಆದರೂ ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಮಂಡ್ಯ ಜಿಲ್ಲಾ ಪಂಚಾಯಿತಿಯ ಸಿಇಒ ಆಗಿದ್ದಾಗ ಶೌಚಾಲಯ ನಿರ್ಮಿಸಿದ ನನ್ನ ಕೆಲಸಕ್ಕೆ ಭಾರತ ಸರ್ಕಾರ ಗೌರವ ಸಲ್ಲಿಸಿದೆ. ಈ ಬಗ್ಗೆಯೂ ರೂಪಾ ಸಾಲಗಳ ಆರೋಪ ಮಾಡಿದ್ದಾರೆ. ಜೊತೆಗೆ ನನ್ನ ಹುಟ್ಟು ಸ್ಥಳ ಹಾಗೂ ಜಾತಿ ಕುರಿತು ರೂಪಾ ಆಧಾರರಹಿತ ಆರೋಪ ಮಾಡಿದ್ದಾರೆ. ಇದು ಸೇವಾ ನಿಯಮದ ವಿರುದ್ಧವಾಗಿದೆ ಎಂದು ದೂರಿನಲ್ಲಿ ರೋಹಿಣಿ ಸಿಂಧೂರಿ ದಾಖಲಿಸಿದ್ದಾರೆ.
ಇದನ್ನೂ ಓದಿ: ಡಿ.ರೂಪಾ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ರೋಹಿಣಿ ಸಿಂಧೂರಿ