ಬೆಂಗಳೂರು : ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಸ್ ರಕ್ಷಾ ರಾಮಯ್ಯರನ್ನು ಯುವ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಯುವ ಕಾಂಗ್ರೆಸ್ ನಾಯಕರಾಗಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ನೇಮಕ ಮಾಡಲಾಗಿದೆ.
ತಮ್ಮ ಈ ನೇಮಕಕ್ಕೆ ಸಂತಸ ವ್ಯಕ್ತಪಡಿಸಿರುವ ರಕ್ಷಾ ರಾಮಯ್ಯ, 'ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಡ್ತಿ ನೀಡಿರುವುದಕ್ಕೆ ಸಂತಸವಾಗುತ್ತಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಈ ನೇಮಕಾತಿ ಮಾಡಲಾಗಿದೆ' ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹೇಳಿದ್ದಾರೆಂದು ಅವರು ತಿಳಿಸಿದ್ದಾರೆ.
'ಪಕ್ಷ ಸಂಘಟನೆಗಾಗಿ ನೀವು ನಿಮ್ಮ ಪೂರ್ಣ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸುತ್ತೀರಿ. ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಕ್ರಿಯಾಶೀಲ ನಾಯಕತ್ವದಲ್ಲಿ ನೀವು ಪಕ್ಷವನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತೀರಿ ಎಂಬ ವಿಶ್ವಾಸವಿದೆ' ಎಂದು ಬಿ ವಿ ಶ್ರೀನಿವಾಸ್ ಅವರು ರಕ್ಷಾ ರಾಮಯ್ಯ ಅವರಿಗೆ ಹೇಳಿದ್ದಾರೆ.
'ಪಕ್ಷ ನೀಡಿರುವ ಜವಾಬ್ದಾರಿಯನ್ನು ವಿನಮ್ರವಾಗಿ ಸ್ವೀಕರಿಸಿ ರಾಷ್ಟ್ರಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಕಳೆದ ಒಂದು ವರ್ಷ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಇದರ ಯಶಸ್ಸಿನ ಆಧಾರದ ಮೇಲೆಯೇ ತಮ್ಮನ್ನು ಈ ಜವಾಬ್ದಾರಿಯುತ ಸ್ಥಾನಕ್ಕೆ ನಿಯೋಜಿಸಲಾಗಿದೆ. ಪಕ್ಷ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ' ಎಂದು ರಕ್ಷಾ ರಾಮಯ್ಯ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕುಕ್ಕೆಯ ಪ್ರಾಕೃತಿಕ ಸೊಬಗಿನ ರಸ್ತೆಯ ಚಿತ್ರವನ್ನು ಟ್ವೀಟ್ ಮಾಡಿದ ಆನಂದ್ ಮಹೀಂದ್ರಾ!
ಇತ್ತೀಚೆಗೆ ಉದಯಪುರದಲ್ಲಿ ಜರುಗಿದ ಕಾಂಗ್ರೆಸ್ ಚಿಂತನ ಸಮಾವೇಶದಲ್ಲಿ ಕೈಗೊಂಡ ನಿರ್ಣಗಳ ಅನುಷ್ಠಾನಕ್ಕೆ ಶ್ರಮಿಸುತ್ತೇನೆ. ರಾಷ್ಟ್ರ್ರಮಟ್ಟದಲ್ಲಿ ಯುವ ಕಾಂಗ್ರೆಸ್ ಮತ್ತು ಯುವ ಸಮೂಹದ ಧ್ವನಿಯಾಗಿ ಕೆಲಸ ಮಾಡುತ್ತೇನೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ನಿರಂತರ ಶ್ರಮವಹಿಸುತ್ತೇನೆ ಎಂದು ರಕ್ಷಾ ರಾಮಯ್ಯ ತಿಳಿಸಿದ್ದಾರೆ.