ಬೆಂಗಳೂರು: ಬಟ್ಟೆ ಮಳಿಗೆಗೆ ಎಂಟ್ರಿ ಕೊಟ್ಟ ದರೋಡೆಕೋರರ ಗ್ಯಾಂಗ್ವೊಂದು ಕೈಗೆ ಸಿಕ್ಕ ಬೆಲೆಬಾಳುವ ವಸ್ತುಗಳನ್ನು ಎಗರಿಸಿಕೊಂಡು ಹೋದ ಘಟನೆ ನಗರದಲ್ಲಿ ನಡೆದಿದೆ. ಕದ್ದು ಪರಾರಿಯಾಗುತ್ತಿದ್ದ ದೃಶ್ಯ ಮಳಿಗೆಯಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ದರೋಡೆಕೋರರು ಬಾಣಸವಾಡಿ ಬಳಿಯ ವರಮಾವು ಸರ್ಕಲ್ನಲ್ಲಿ ಬಟ್ಟೆ ಮಳಿಗೆ ಹೊಂದಿರುವ ದಿಲೀಪ್ ಎಂಬುವರ ಒಡವೆ ಹಾಗೂ ಹಣವಿದ್ದ ಲಗೇಜ್ ದೋಚಿ ಪರಾರಿಯಾಗಿದ್ದಾರೆ.
ಹೆಂಡತಿ ಊರಿಗೆ ಹೊರಟಿದ್ದ ದಿಲೀಪ್, ಬೆಲೆ ಬಾಳುವ ವಸ್ತು ಹಾಗೂ ಒಡವೆ ಸಮೇತ ಲಗೇಜ್ ತೆಗೆದುಕೊಂಡು ಮಳಿಗೆಗೆ ಹೋಗಿದ್ದರು. ಕ್ಷಣಾರ್ಧದಲ್ಲಿ ಇದನ್ನು ಗಮನಿಸಿದ ಗ್ಯಾಂಗ್ ಮಳಿಗೆಗೆ ಎಂಟ್ರಿ ಕೊಟ್ಟಿತ್ತು. ಒಬ್ಬನನ್ನ ಹೊರ ನಿಲ್ಲಿಸಿ ಗಂಡ-ಹೆಂಡ್ತಿಯಂತೆ ನೈಟಿ ಖರೀದಿಸುವಂತೆ ಒಳ ಬಂದ ಖದೀಮರು, ಅಂಗಡಿಯಲ್ಲಿದ್ದವರ ಗಮನ ಬೇರೆಡೆ ಸೆಳೆದು ಲಗೇಜ್ ಎಗರಿಸಿ ಪರಾರಿಯಾಗಿದ್ದಾರೆ. ಕೃತ್ಯ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.