ಬೆಂಗಳೂರು: ತನಗೆ ಮದುವೆಯಾದರೂ ತಾನು ಪ್ರೀತಿಸುತ್ತಿದ್ದ ಮತ್ತೊಬ್ಬ ಯುವತಿ ಪರಪುರುಷನೊಂದಿಗೆ ಓಡಾಡುತ್ತಿರುವುದಾಗಿ ಅನುಮಾನ ವ್ಯಕ್ತಪಡಿಸಿ ಲಾಡ್ಜ್‌ಗೆ ಕರೆದೊಯ್ದು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ದುಷ್ಕರ್ಮಿಯನ್ನು ಬೆಂಗಳೂರಿನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರ ರೈಲ್ವೆ ಠಾಣೆ ಬಳಿಯಿರುವ ಲಾಡ್ಜ್ನಲ್ಲಿ ಒಡಿಶಾ ಮೂಲದ ದೀಪಾ ಬದನ್ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇನ್ಸ್ಪೆಕ್ಟರ್ ಸುರೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಅನ್ಮಲ್ ರತನ್ಕಂ ದರ್ ಪತ್ತೆ ಹೆಚ್ಚಿ ಬಂಧಿಸಿದ್ದಾರೆ.
ಆರೋಪಿ ಅನ್ಮಲ್ ಎರಡು ವರ್ಷಗಳ ಹಿಂದೆ ಕೊಲೆಯಾದ ಯುವತಿಯ ಸ್ನೇಹಿತೆಯನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದ. ಹೆಚ್ಎಎಲ್ನಲ್ಲಿ ದಂಪತಿ ವಾಸವಾಗಿದ್ದರು. ಅನ್ಮಲ್ ಪತ್ನಿ ಮತ್ತು ಕೊಲೆಯಾದ ದೀಪಾ ಒಡಿಶಾದಲ್ಲಿ ಕಾಲೇಜು ಸಹಪಾಠಿಗಳಾಗಿದ್ದರು. ಇದೇ ಪರಿಚಯ ಮೇರೆಗೆ ದೀಪಾ ಸಹ ಬೆಂಗಳೂರಿಗೆ ಬಂದು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗಾಗ್ಗೆ ಗೆಳತಿಗೆ ಮನೆಗೆ ದೀಪಾ ಮನೆಗೆ ಹೋಗಿ ಬರುತ್ತಿದ್ದಳು.
ಈ ನಡುವೆ ಆರೋಪಿ ಅನ್ಮಲ್ ಹಾಗೂ ದೀಪಾ ಸ್ನೇಹಿತರಾಗಿ ಆತ್ಮೀಯತೆ ಹೆಚ್ಚಾಗಿದೆ. ಅಲ್ಲದೇ, ಇಬ್ಬರು ದೈಹಿಕ ಸಂಬಂಧ ಬೆಳೆಸಿಕೊಂಡಿದ್ದರು. ಆದರೆ, ಇತ್ತೀಚೆಗೆ ದೀಪಾ ಸರಿಯಾಗಿ ತನ್ನ ಫೋನ್ಗೆ ರೆಸ್ಪಾನ್ಸ್ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಅನ್ಮಲ್ ಅಸಮಾಧಾನ ಹೊಂದಿದ್ದ ಎನ್ನಲಾಗುತ್ತಿದೆ.
ಹೀಗಾಗಿ ಜೂನ್ 9ರಂದು ದೀಪಾಗೆ ಕರೆ ಮಾಡಿ ಲಾಡ್ಜ್‌ಗೆ ಕರೆಯಿಸಿಕೊಂಡಿದ್ದ. ಈ ವೇಳೆ ಬೇರೊಬ್ಬನೊಂದಿಗೆ ಓಡಾಡುತ್ತೀಯಾ ಎಂದು ಕ್ಯಾತೆ ತೆಗೆದು ಜಗಳ ಮಾಡಿದ್ದಾನೆ. ಕೋಪದಿಂದ ತಲೆದಿಂಬಿನಿಂದ ಉಸಿರುಗಟ್ಟಿಸಿದ್ದಾನೆ. ಸಾವು ಖಚಿತವಾಗುತ್ತಿದ್ದಂತೆ ರೂಮ್ಗೆ ಬೀಗ ಹಾಕಿ ತಲೆಮರೆಸಿಕೊಂಡ. ಬಳಿಕ ಮಾರನೇ ದಿನ ಲಾಡ್ಜ್ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಸ್ಥಳಕ್ಕೆ ಬಂದ ಪೊಲೀಸರು ಬೀಗ ಮುರಿದು ಒಳ ನುಗ್ಗಿದಾಗ ದೀಪಾ ಕೊಲೆಯಾಗಿರುವ ಸಂಗತಿ ಬಯಲಾಗಿತ್ತು.
ಇದನ್ನೂ ಓದಿ: ಪತ್ನಿಯ ಗೆಳತಿಯನ್ನೇ ಪ್ರೀತಿಸಿ ಲಾಡ್ಜ್‌ಗೆ ಕರೆದೊಯ್ದು ಕೊಂದು ಹಾಕಿದ!