ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಧ್ವನಿವರ್ಧಕ ನಿರ್ಬಂಧಿಸಿ ಹೊರಡಿಸಿದ ಆದೇಶ ಸಮುದಾಯದಲ್ಲಿ ಗೊಂದಲ ಸೃಷ್ಟಿಸಿದ ಹಿನ್ನೆಲೆ ಇದೀಗ ಸ್ಪಷ್ಟೀಕರಣ ನೀಡಿದೆ.
ಮಾರ್ಚ್ 9ಕ್ಕೆ ಹೊರಡಿಸಿದ ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಲೌಡ್ ಸ್ಪೀಕರನ್ನು ಬಳಸಬಾರದು ಎಂಬ ಆದೇಶವನ್ನು ಬೆಳಗ್ಗಿನ ಅಝಾನ್ ಮಾಡಬಾರದು ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ತನ್ನ ಸ್ಪಷ್ಟೀಕರಣದಲ್ಲಿ ತಿಳಿಸಿದೆ.

ಧ್ವನಿವರ್ಧಕವನ್ನು ಬೆಳಗ್ಗಿನ ಅಝಾನ್ ವೇಳೆ ಬಳಸಬಹುದಾಗಿದೆ. ಜೊತೆಗೆ ಚಂದ್ರ ದರ್ಶನ, ಸಾವಿನ ಘೋಷಣೆ, ಅಂತ್ಯಸಂಸ್ಕಾರದ ಸಮಯವನ್ನು ಘೋಷಿಸಲು ಬಳಸಬಹುದು ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ. ಧ್ವನಿವರ್ಧಕವನ್ನು ಮಸೀದಿ ಮತ್ತು ದರ್ಗಾಗಳಲ್ಲಿ ರಾತ್ರಿ 10ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಬಳಸದಂತೆ ನಿಷೇಧ ಹೇರಲಾಗಿದೆ.
ಇದನ್ನು ತಪ್ಪಾಗಿ ಅರ್ಥೈಸಲಾಗಿದೆ. ಹೀಗಾಗಿ ಮುಂಜಾನೆಯ ಅಝಾನ್ಅನ್ನು ನಿಷೇಧಿಸಿಲ್ಲ. ಈ ವೇಳೆ ಮಾರ್ಗಸೂಚಿಯಂತೆ ಧ್ವನಿ ವರ್ಧಕವನ್ನು ಬಳಸಬಹುದಾಗಿದೆ. ಈ ಸ್ಪಷ್ಟೀಕರಣವನ್ನು ಎಲ್ಲಾ ಮಸೀದಿಗಳಿಗೆ ನೀಡುವಂತೆ ವಕ್ಫ್ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.