ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯೇನೋ ಆಗ್ತಿದೆ. ಆದರೆ, ಸಕ್ರಿಯ ಕೇಸ್ಗಳು ಲಕ್ಷದಷ್ಟು ಬಾಕಿ ಇದೆ. ಈ ನಡುವೆ 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ, ಶುಲ್ಕ ಪಡೆಯುವ ಪ್ರಕ್ರಿಯೆಗಳು ಈಗಾಗಲೇ ಶುರುವಾಗಿದೆ. ಜುಲೈ 1 ರಿಂದ ಶೈಕ್ಷಣಿಕ ವರ್ಷಾರಂಭ ಮಾಡಲು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಆದರೆ ರಾಜ್ಯದ ಎಲ್ಲ ಬೋಧನಾ ಹಾಗೂ ಬೋಧನೇತರ ಸಿಬ್ಬಂದಿಗೆ ಕೋವಿಡ್ ಲಸಿಕಾ ಕಾರ್ಯ ಪೂರ್ಣವಾಗದೇ ಶಾಲೆ ಆರಂಭ ಹೇಗೆ ಸಾಧ್ಯ? ಎಂಬ ಮಾತುಗಳು ಕೇಳಿ ಬರುತ್ತಿವೆ. 2ನೇ ಅಲೆಯ ಬೆನ್ನಲ್ಲೇ 3ನೇ ಅಲೆಯ ಭೀತಿಯೂ ಇರುವುದರಿಂದ ಭೌತಿಕ ತರಗತಿಗಾಗಿ ಅಥವಾ ಶಾಲಾ ಕೆಲಸಗಳಿಗೆ ಶಿಕ್ಷಕರು ಬಂದು ಹೋಗುವುದು ಮಾಡುವುದರಿಂದ ಕೊರೊನಾ ಸೋಂಕು ಇನ್ನಷ್ಟು ಹರಡಲು ದಾರಿ ಮಾಡಿಕೊಟ್ಟಂತೆ ಆಗಲಿದೆ.
ಮಕ್ಕಳಿಗೆ ಸೂಕ್ತ ಮಾರ್ಗದರ್ಶನ: ಕೊರೊನಾ ಕಾರಣಕ್ಕೆ ಶಾಲೆಗಳಲ್ಲಿ ಭೌತಿಕವಾಗಿ ತರಗತಿಯನ್ನ ಪ್ರಾರಂಭಿಸಲು ಸಾಧ್ಯವಾಗದೇ ಇದ್ದರೆ ಪರ್ಯಾಯ ಮಾರ್ಗದಲ್ಲಿ ತರಗತಿ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಶಾಲೆಗಳು ಆರಂಭವಾದ ನಂತರ ಪ್ರತಿದಿನವೂ ನಾಲ್ಕೈದು ಮಕ್ಕಳನ್ನ ಶಾಲೆಗಳಿಗೆ ಕರೆಸಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಅಂತಲೂ ಸಚಿವರು ಸಲಹೆ ನೀಡಿದ್ದಾರೆ.
ಶಿಕ್ಷಕೇತರ ಸಿಬ್ಬಂದಿಗೆ ಲಸಿಕೆ ಹಾಕಿಸುವ ಅನಿರ್ವಾಯ: ಆದರೆ, ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಿ ಎರಡು ಸೇರಿ ಸುಮಾರು 4 ಲಕ್ಷದಷ್ಟು ಶಾಲಾ ಶಿಕ್ಷಕರು ಇದ್ದಾರೆ. ಇವರಲ್ಲಿ ಕೋವಿಡ್ ಕೆಲಸದಲ್ಲಿ ನಿರತರಾಗಿರುವ ಶಿಕ್ಷಕರಿಗೆ, ಎಸ್ಎಸ್ಎಲ್ಸಿ ಪರೀಕ್ಷೆಗೆ ನಿಯೋಜನೆ ಆಗ್ತಿರೋರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗ್ತಿದೆ. ಆದರೆ, ಉಳಿದ ಶಿಕ್ಷಕರಿಗೆ ಲಸಿಕೆ ಯಾವಾಗಾ? ಎಂಬ ಗೊಂದಲ ಹಾಗೇ ಉಳಿದಿದೆ.
ಇಲಾಖೆ ಶಾಲಾರಂಭಕ್ಕೂ ಮುನ್ನವೇ ಮುಂಜಾಗ್ರತಾ ಕ್ರಮವಾಗಿ ಎಲ್ಲ ಶಿಕ್ಷಕರಿಗೂ ಶಿಕ್ಷಕೇತರ ಸಿಬ್ಬಂದಿಗೆ ಲಸಿಕೆ ಹಾಕಿಸುವ ಅನಿರ್ವಾಯ ಇದೆ. ಕಾರಣ, ಮಕ್ಕಳ ಜೊತೆಗೆ ಹೆಚ್ಚು ಸಮಯ ಒಡನಾಟದಲ್ಲಿ ಇರುವುದರಿಂದ, ಭೌತಿಕವಾಗಿ ಭೇಟಿಯಾಗುವ ಪ್ರಸಂಗ ಎದುರಾದಾಗ ಶಿಕ್ಷಕರಿಂದಲೇ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರಲಿದೆ.
ಶೈಕ್ಷಣಿಕ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ: ಈ ಕುರಿತು ಪ್ರತಿಕ್ರಿಯಿಸಿರುವ ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳೀಕಟ್ಟೆ, ಶಿಕ್ಷಣ ಇಲಾಖೆಯು ಜುಲೈ ಒಂದರಿಂದ ಶಾಲೆ ಆರಂಭಿಸುವಂತೆ ತಿಳಿಸಿದ್ದು, ಇದರ ಜೊತೆಗೆ ದಾಖಲಾತಿ ಪ್ರಾರಂಭಿಸಿ ಶಾಲೆಗೆ ಶಿಕ್ಷಕರು ಬರಬೇಕು ಅಂತ ತಿಳಿಸಿದೆ. ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ.
ಆದರೆ ಹಲವು ತಿಂಗಳಿಂದ ಆದ್ಯತೆ ಮೇರೆಗೆ ಶಿಕ್ಷಕರಿಗೆ ಲಸಿಕೆ ಕೊಡಿಸಿ ಅಂತ ಮನವಿ ಮಾಡುತ್ತಲೇ ಇದ್ದೇವೆ. ರಾಜ್ಯದಲ್ಲಿ ಸ್ಯಾಟ್ಸ್ ದಾಖಲಾತಿ ಪ್ರಕಾರ, 4,16,000 ಶಿಕ್ಷಕರು ಇದ್ದು ಇದರಲ್ಲಿ ಕೇವಲ 85-90 ಸಾವಿರದಷ್ಟು ಶಿಕ್ಷಕರಿಗೆ ಮಾತ್ರ ಲಸಿಕೆ ಕೊಟ್ಟಿದ್ದಾರೆ ಎಂದರು.
ಇಂತಹ ಸಮಯದಲ್ಲಿ ಶಿಕ್ಷಕರು ಶಾಲೆಗೆ ಬಂದು ಮಕ್ಕಳ ಜೊತೆಗೆ ಬೆರೆತಾಗ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದ್ದು, ಅಪಾಯಕಾರಿ ಸೂಚನೆಯಾಗುತ್ತೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ. ಭೌತಿಕ ತರಗತಿಗಳು ಆರಂಭವಾಗುವ ವಾತಾವರಣ ಮುಂದೆ ಸೃಷ್ಟಿಯಾದ ಸಂದರ್ಭದಲ್ಲಿ ಶಿಕ್ಷಕರಿಗೆ ಲಸಿಕೆ ನೀಡದೇ ಇದ್ದರೆ 3ನೇ ಅಲೆಗೆ ತತ್ತರಿಸಿ ಹೋಗಬೇಕಾಗುತ್ತೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್- ನವೆಂಬರ್ ತಿಂಗಳು 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಟಾರ್ಗೆಟ್ ಎಂಬ ತಜ್ಞರ ನುಡಿ, ಜುಲೈನಲ್ಲೇ ಎಫೆಕ್ಟ್ ಆಗಬಹುದು. ಹೀಗಾಗಿ, ಶಾಲಾರಂಭಕ್ಕೂ ಮುನ್ನ ಲಸಿಕಾಭಿಯಾನ ನಡೆಸಿದರೆ ಉತ್ತಮ. ಇಲ್ಲ ಅಂದರೆ ಸೋಂಕಿಗೆ ತುತ್ತಾಗಬೇಕಾಗುತ್ತೆ ಎಂದರು.
ಓದಿ: ಅರುಣ್ಸಿಂಗ್ ಭೇಟಿ ಮಾಡಲು ಸಮಯವನ್ನೇ ಕೇಳಿಲ್ಲ: ಯತ್ನಾಳ್ ಸ್ಪಷ್ಟನೆ