ಬೆಂಗಳೂರು: ಬೆಂಗಳೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ನಿರಂತರ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು 10 ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಚಿಕಿತ್ಸೆ ನೀಡುವಲ್ಲಿ ವಿಳಂಬ, ನಿಗದಿಗಿಂತ ಹೆಚ್ಚು ಹಣ ಪಡೆಯುವುದು, ರೋಗಿಗಳೊಂದಿಗೆ ಅನುಚಿತ ವರ್ತನೆ, ಅವಧಿ ಮೀರಿದ ಔಷಧಿ ವಿತರಣೆಯ ಬಗ್ಗೆ ವ್ಯಾಪಕ ಆರೋಪಗಳು ಹಾಗೂ ದೂರುಗಳು ಕೇಳಿ ಬಂದಿದ್ದವು. ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡ ಈ ದೂರುಗಳ ಕುರಿತು ಗೌಪ್ಯ ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸಿತ್ತು. ಅಕ್ರಮ ನಡೆಯುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಂಡಿದ್ದರು.
ನೆಲಮಂಗಲ, ಯಲಹಂಕ, ಕೆ.ಆರ್.ಪುರ, ಜಯನಗರ, ಕೆ.ಸಿ.ಜನರಲ್ ಆಸ್ಪತ್ರೆ, ಸಂಜಯ್ ಗಾಂಧಿ ಆಸ್ಪತ್ರೆ, ಇಂದಿರಾಗಾಂಧಿ ಆಸ್ಪತ್ರೆ, ರಾಜೀವ್ ಗಾಂಧಿ ಆಸ್ಪತ್ರೆ, ಗೌಸಿಯಾ ಆಸ್ಪತ್ರೆ ಹಾಗೂ ವಾಣಿವಿಲಾಸ್ ಆಸ್ಪತ್ರೆಗಳಿಗೆ ಏಕಕಾಲದಲ್ಲಿ ಅಧಿಕಾರಿಗಳು ಪ್ರತ್ಯೇಕ ತಂಡಗಳಾಗಿ ಭೇಟಿ ನೀಡಿದರು. ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಕೆ.ಸಿ. ಅವರು ಜನರಲ್ ಆಸ್ಪತ್ರೆ, ಐಜಿಪಿ ಸುಬ್ರಮಣ್ಯೇಶ್ವರ ರಾವ್ ವಾಣಿ ವಿಲಾಸ್ ಹಾಗೂ ಸಂಜಯ್ ಗಾಂಧಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ: ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು