ಬೆಂಗಳೂರು : ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾದ ಕುರಿತಂತೆ ಸಂಸ್ಥೆಯ ನಿಬಂಧಕರು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳು ವರದಿ ಮಾಡಿರುವಂತೆ ಲೋಕಾಯುಕ್ತದಲ್ಲಿ 52 ಮಂದಿಗೆ ಕೊರೊನಾ ಸೋಂಕು ತಗುಲಿಲ್ಲ. ಬದಲಿಗೆ 32 ಮಂದಿ ಸಿಬ್ಬಂದಿಗೆ ಮಾತ್ರವೇ ಕೊರೊನಾ ದೃಢಪಟ್ಟಿದೆ. ಎಲ್ಲರೂ ಹೋಮ್ ಐಸೋಲೇಷನ್ನಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಲೋಕಾಯುಕ್ತ ಸಂಸ್ಥೆಯ ಬೆಂಗಳೂರಿನ ಕೇಂದ್ರ ಕಚೇರಿಯ ನಿಬಂಧಕರು ಸ್ಪಷ್ಟನೆ ನೀಡಿದ್ದಾರೆ.
ಲೋಕಾಯುಕ್ತ ಕಚೇರಿಯಲ್ಲಿ ಒಟ್ಟು 466 ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನವರಿ 18 ಮತ್ತು 19ರಂದು 365 ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇವರಲ್ಲಿ 32 ಸಿಬ್ಬಂದಿಗೆ ಮಾತ್ರ ಕೋವಿಡ್ ಸೋಂಕು ಕಂಡು ಬಂದಿದೆ.
ಇದನ್ನೂ ಓದಿ: ಲೋಕಾಯುಕ್ತ ಕಚೇರಿಯಲ್ಲಿನ 52 ಸಿಬ್ಬಂದಿಗೆ ಕೋವಿಡ್ ದೃಢ
ರಾಜ್ಯಾದ್ಯಂತ ಕೋವಿಡ್ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಗೆ ವಿಚಾರಣೆಗೆ ಬರುವ ದೂರುದಾರರು, ಆರೋಪಿತರು, ಸಾಕ್ಷಿದಾರರು, ಅಧಿಕಾರಿಗಳು, ಸಿಬ್ಬಂದಿಯಿಂದ ಕೋವಿಡ್ ಹರಡುವ ಸಾಧ್ಯತೆ ಹೆಚ್ಚಿದೆ. ಈ ಕಾರಣಕ್ಕಾಗಿ ಪ್ರಕರಣಗಳ ವಿಚಾರಣೆ ಮುಂದೂಡುವ ಕುರಿತು ಅಗತ್ಯ ಕ್ರಮಕೈಗೊಳ್ಳಬಹುದೆಂದು ವಿಚಾರಣಾಧಿಕಾರಿಗಳಿಗೆ ತಿಳಿಸಲಾಗಿದೆ.
ಪರಿಸ್ಥಿತಿ ಅವಲೋಕಿಸಿ ವಿಚಾರಣೆ ನಡೆಸಬೇಕೆ ಅಥವಾ ಮುಂದೂಡಬೇಕೆ ಎಂಬ ಬಗ್ಗೆ ವಿಚಾರಣಾಧಿಕಾರಿಗಳು ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳಿಂದ ಕೋವಿಡ್ ಪರಿಸ್ಥಿತಿ ನೋಡಿಕೊಂಡು ವಿಚಾರಣೆ ಮುಂದುವರೆಯಲಿವೆ ಎಂದು ತಿಳಿಸಲಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ