ಬೆಂಗಳೂರು: ಭ್ರಷ್ಟರ ವಿರುದ್ಧ ಲೋಕಾಯುಕ್ತವು ಸಮರ ಶುರುಮಾಡಿದೆ. ಎಸಿಬಿ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರು ಸೇರಿ ರಾಜ್ಯ ವಿಭಾಗವಾರು ಕಚೇರಿಗಳು ಹಾಗೂ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಯಥಾವತ್ ವರ್ಗಾಯಿಸುವಂತೆ ರಾಜ್ಯ ಸರ್ಕಾರಕ್ಕೆ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಪತ್ರ ಬರೆದಿದ್ದಾರೆ.
ಕಳೆದ ಆರು ವರ್ಷಗಳ ಬಳಿಕ ಪೊಲೀಸ್ ಬಲ ಪಡೆದುಕೊಂಡಿರುವ ಲೋಕಾಯುಕ್ತ ಈಗಾಗಲೇ ಭ್ರಷ್ಟರಿಗೆ ಸಿಂಹಸ್ವಪ್ನವಾಗುವ ಸೂಚನೆ ನೀಡಿದೆ. ಇದಕ್ಕೆ ಪೂರಕವೆಂಬಂತೆ ಲಂಚ ಪ್ರಕರಣದಲ್ಲಿ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್ ಹಾಗೂ ಆಪ್ತ ಸಹಾಯಕ ಉಮೇಶ್ ತಮ್ಮ ಖೆಡ್ಡಾಕ್ಕೆ ಬೀಳಿಸಿ ಜೈಲಿಗಟ್ಟಿದೆ. ಹೈಕೋರ್ಟ್ ಆದೇಶದಂತೆ ಎಸಿಬಿಯು ಪ್ರಕರಣ ಹಸ್ತಾಂತರ ಪ್ರಕ್ರಿಯೆ ನಡೆಸುತ್ತಿದೆ. ಇದರ ಬೆನ್ನಲೇ ಲೋಕಾಯುಕ್ತರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನಂದಿತಾ ಶರ್ಮಾಗೆ ಪತ್ರ ಬರೆದಿದ್ದಾರೆ.
ಎಸಿಬಿಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ಅಧಿಕಾರಿಗಳು ಹಾಗೂ ಇತರ ವೃಂದದ ಸಿಬ್ಬಂದಿಯನ್ನ ತಮ್ಮ ತೆಕ್ಕೆಗೆ ನೀಡಬೇಕು. ಎಸಿಬಿ ಪ್ರಧಾನ ಕಚೇರಿ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿರುವ ವಿಭಾಗವಾರು ಎಸಿಬಿ ಕಚೇರಿಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಬೇಕು. ಪ್ರಕರಣಗಳ ವರ್ಗಾಯಿಸುವುದರ ಜೊತೆಗೆ ಎಸಿಬಿಯಲ್ಲಿ ಬಳಸುತ್ತಿದ್ದ ವಾಹನಗಳು, ಉಪಕರಣಗಳು, ಡಿಜಿಟಲ್ ಸಾಕ್ಷ್ಯಾಧಾರಗಳು, ಎಲೆಕ್ಟ್ರಾನಿಕ್ ಡಿವೈಸ್ಗಳು ಸೇರಿ ಇನ್ನಿತರ ಸೌಲಭ್ಯಗಳನ್ನು ಹಸ್ತಾಂತರಿಸುವಂತೆ ಪತ್ರದಲ್ಲಿ ಲೋಕಾಯುಕ್ತರು ಉಲ್ಲೇಖಿಸಿದ್ದಾರೆ.
2016ರಲ್ಲಿ ಸ್ಥಾಪನೆಯಾದಾಗ ಎಸಿಬಿಗೆ ನೀಡಲಾಗಿದ್ದ ಪೊಲೀಸ್ ಠಾಣೆ ಅಧಿಕಾರಿಗಳನ್ನ ಮೊಟಕುಗೊಳಿಸಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಪ್ರಕರಣಗಳನ್ನ ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ರಾಜ್ಯ ಸರ್ಕಾರವು ಎಸಿಬಿ ಮುಖ್ಯಸ್ಥರಿಗೆ ಆದೇಶಿಸಿತ್ತು. ಇದರಂತೆ ಪ್ರಕರಣಗಳ ವರ್ಗಾವಣೆ ಪ್ರಕ್ರಿಯೆ ಎಸಿಬಿ ನಡೆಸುತ್ತಿದೆ.
ಪ್ರಕರಣ ಹಸ್ತಾಂತರ ಬಳಿಕ ತನಿಖೆ ಹಾಗೂ ವಿಚಾರಣೆ ನಡೆಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ಅಗತ್ಯವಿದೆ. ದಾಳಿ ಅಥವಾ ಟ್ರ್ಯಾಪ್ ಕಾರ್ಯಾಚರಣೆ ನಡೆಸಲು ವಾಹನಗಳ ಅವಶ್ಯಕತೆಯಿದೆ. ಲೋಕಾಯುಕ್ತ ಪ್ರಧಾನ ಕಚೇರಿ ಕಿರಿದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ನಿಯೋಜನೆಯಾದರೆ ಸ್ಥಳಾವಕಾಶ ತೊಂದರೆಯಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜಿಲ್ಲಾ ಲೋಕಾಯುಕ್ತ ಕಚೇರಿಗಳಲ್ಲಿ ಇದೇ ಪರಿಸ್ಥಿತಿ ಎದುರಾಗಲಿದೆ. ಹೀಗಾಗಿ ಪ್ರಸ್ತಕ ಕಾರ್ಯನಿರ್ವಹಿಸುತ್ತಿದ್ದ ಎಸಿಬಿ ಕಚೇರಿಗಳನ್ನೇ ಲೋಕಾಯುಕ್ತ ಕಚೇರಿಗಳಾಗಿ ಪರಿವರ್ತಿಸಬೇಕು. ಎಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಪಿಎಸ್ ಹಾಗೂ ಕೆಪಿಎಸ್ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜಿಸಬೇಕು. ಎಲೆಕ್ಟ್ರಾನಿಕ್ ಉಪಕರಣಗಳು, ಕಂಪ್ಯೂಟರ್ ಇನ್ನಿತರ ಲಾಜೆಸ್ಟಿಕ್ ವಸ್ತುಗಳನ್ನು ಲೋಕಾಯುಕ್ತ ವ್ಯಾಪ್ತಿಗೆ ಒಳಪಡಿಸಬೇಕು. ಸರ್ಕಾರವು ಎಸಿಬಿ ಅಧಿಕಾರಿ - ಸಿಬ್ಬಂದಿ ವೇತನ, ಇನ್ನಿತರ ಖರ್ಚು - ವೆಚ್ಚಗಳನ್ನು ಲೋಕಾಗೆ ವರ್ಗಾಯಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಎಸಿಬಿಯಲ್ಲಿ ದಾಖಲಾಗಿರುವ ಸುಮಾರು 1 ಸಾವಿರ ಪ್ರಕರಣಗಳಲ್ಲಿ ಬೆಂಗಳೂರು ನಗರದಲ್ಲಿ 300ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದೆ. ಲೋಕಾಯುಕ್ತರ ಸೂಚನೆಯಂತೆ ಎಸಿಬಿ ಹಿರಿಯ ಅಧಿಕಾರಿಗಳು ಎಸಿಬಿಯಲ್ಲಿ ಕೆಲಸ ಮಾಡುತ್ತಿದ್ದ 141 ಪೊಲೀಸ್ ಕಾನ್ಸ್ಟೇಬಲ್ಗಳನ್ನು ಹಸ್ತಾಂತರಿಸಲಾಗಿದ್ದು, ಇನ್ನಷ್ಟೇ ಲೋಕಾದಲ್ಲಿ ರಿಪೋರ್ಟ್ ಮಾಡಿಕೊಳ್ಳಬೇಕಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 8 ಎಸಿಬಿ ವಲಯಗಳಿವೆ. ದಲಾಯತ್, ಲಿಪಿಕ ಸಿಬ್ಬಂದಿ ಹುದ್ದೆಗಳು ಹೊರತುಪಡಿಸಿದರೆ ಒಟ್ಟು 447 ಕಾರ್ಯಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದಾರೆ.
ಎಸಿಬಿ ಹಾಗೂ ಲೋಕಾಯುಕ್ತದಲ್ಲಿರುವ ಅಧಿಕಾರಿ, ಸಿಬ್ಬಂದಿ ವಿವರ:
ಎಡಿಜಿಪಿ | 1 | 1 |
ಎಸ್ಪಿ | 10 | 23 |
ಡಿವೈಎಸ್ಪಿ | 35 | 43 |
ಪಿಐ | 75 | 90 |
ಪಿಎಸ್ಐ | 0 | 13 |
ಸಿಹೆಚ್ಸಿ | 50 | 145 |
ಸಿಪಿಸಿ | 150 | 234 |
ವಾಹನ ಚಾಲಕರು | 81 | 148 |
ಒಟ್ಟು | 447 | 747 |