ಬೆಂಗಳೂರು : ರಾಜ್ಯ ರಾಜಕಾರಣದ ಪರ್ಯಾಯವಾಗಿದ್ದ ಲೋಕ್ ಶಕ್ತಿ ಪಕ್ಷಕ್ಕೆ ಮತ್ತೆ ಚಾಲನೆ ನೀಡಲಾಗುತ್ತಿದೆ. ಕಾಂಗ್ರೆಸ್-ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಪಕ್ಷ ಸಂಘಟಿಸಲು ತೀರ್ಮಾನಿಸಲಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ಸಮ್ಮುಖದಲ್ಲಿ ರಾಜ್ಯದಲ್ಲಿ ಮತ್ತೆ ಲೋಕ್ ಶಕ್ತಿ ಪಕ್ಷವನ್ನು ಸಂಘಟನೆ ಮಾಡಲು, ಭವಿಷ್ಯದ ಎಲ್ಲಾ ಚುನಾವಣೆಗಳಲ್ಲೂ ಸಕ್ರಿಯವಾಗಿ ಸ್ಪರ್ಧಿಸಲು ನಿರ್ಧರಿಸಿದೆ.
ರಾಜ್ಯದಲ್ಲಿನ ಇಂದಿನ ರಾಜಕೀಯ ದುಸ್ಥಿತಿಯನ್ನು ಕಂಡು ಕರ್ನಾಟಕ ಮಣ್ಣಿನ ಹಾಗೂ ಕನ್ನಡದ ಅಸ್ಮಿತೆಯನ್ನು ಹೊಂದಿರುವ ಪರ್ಯಾಯ ರಾಜಕೀಯ “ಶಕ್ತಿ”ಯನ್ನು ಹುಟ್ಟು ಹಾಕಬೇಕೆಂಬುದೆ ನಮ್ಮ ಉದ್ದೇಶ. ಆದ ಕಾರಣ ಮೌಲ್ಯಾಧಾರಿತ ರಾಜಕಾರಣದ ರೂವಾರಿಯಾದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಂದ ಸ್ಥಾಪಿತವಾದ “ಲೋಕ್ ಶಕ್ತಿ ” ಕನ್ನಡ ನೆಲದ ಹಾಗೂ ಕನ್ನಡಿಗರ ಪಕ್ಷ. ಆದ್ದರಿಂದ ನಾವು “ಲೋಕ್ ಶಕ್ತಿ ” ಪಕ್ಷವನ್ನು ರಾಜ್ಯದಲ್ಲಿ ಕರ್ನಾಟಕಕ್ಕಾಗಿ, ಕನ್ನಡಗರಿಗಾಗಿ ಲೋಕಾರ್ಪಣೆ ಮಾಡಲಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ರಾಕೇಶ್ ಲಿಮಾಯ ಹೇಳಿದರು.
ಜಾತಿ ಆಧಾರಿತ ರಾಜಕಾರಣ ಹೊರತುಪಡಿಸಿ ಜಾತ್ಯಾತೀತ ತತ್ವ ಸಿದ್ಧಾಂತ, ಸಹಬಾಳ್ವೆಯ ಮೂಲ ತತ್ವಗಳ ಆಧಾರದ ಮೇಲೆ ಪಕ್ಷವನ್ನು ಮುನ್ನಡೆಸಲು ತೀರ್ಮಾನಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ಲೋಕ್ ಜನಶಕ್ತಿ ಪಕ್ಷ ಅಸ್ಥಿತ್ವದಲ್ಲಿದೆ. ರಾಜ್ಯದಲ್ಲಿ ಪಕ್ಷದ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಪರಂಪರೆಯನ್ನು ಮುನ್ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಲೋಕ್ ಶಕ್ತಿ ಪಕ್ಷದ ರಾಜ್ಯಾಧ್ಯಕ್ಷ ಚಂದ್ರಶೇಖರ ವಿ. ಸ್ಥಾವರಮಠ ಮಾತನಾಡಿ, ಸಿಂಧಗಿ, ಹಾನಗಲ್ ಕ್ಷೇತ್ರದ ಉಪಚುನಾವಣೆ, ಜಿಲ್ಲಾ, ತಾಲೂಕು ಸೇರಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ನೆಲೆ ವಿಸ್ತರಿಸಿಕೊಳ‍್ಳಲು ಉದ್ದೇಶಿಸಲಾಗಿದೆ. 25 ವರ್ಷಗಳ ಹಿಂದೆ ಎನ್‌ಡಿಎ ಜೊತೆ ಹೊಂದಾಣಿಕೆ ಮಾಡಿಕೊಂಡು ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಲೋಕ್ ಶಕ್ತಿ ಗೆದ್ದಿತ್ತು. ಇದೀಗ ಮತ್ತೆ ತನ್ನ ಗತ ವೈಭವವನ್ನು ಮರಳಿ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ ರಾಜಕೀಯ ಸನ್ನಿವೇಶಗಳು ರಾಷ್ಟ್ರ ಹಾಗೂ ರಾಜ್ಯದಲ್ಲಿ ಸಾಕಷ್ಟು ದ್ವಂದ್ವ ಮತ್ತು ಗೊಂದಲಮಯ ವಾತಾವರಣ ನಿರ್ಮಾಣ ಮಾಡಿವೆ. ಜನರ ಅಶೋತ್ತರಗಳಿಗೆ ಸ್ಪಂದಿಸಿದ ಸರ್ಕಾರಗಳು ಜನರ ಬದುಕನ್ನು ದುಸ್ಥಿತಿಗೆ ದೂಡಿವೆ. ರಾಜಕೀಯ ಅಸ್ಥಿರತೆ ಒಂದೆಡೆಯಾದರೆ ಮತ್ತೊಂದಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಸನ್ನಿವೇಶದಿಂದ ಜನರನ್ನು ಹೊರ ತರುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದರು.
ಲೋಕ್ ಶಕ್ತಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ಶಾಮಲ್, ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಚಿಕ್ಕಾರೆಡ್ಡಿ, ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ವೀರೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.