ಬೆಂಗಳೂರು: ದೇಶದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ (1975 ರಿಂದ 1977ವರೆಗೆ) ರಾಜಕೀಯ ಪರಿಸ್ಥಿತಿ ಅಲ್ಲೋಲ-ಕಲ್ಲೋಲವಾಗಿದ್ದರೂ ಸಹ 1977 ರ ಸಾರ್ವತ್ರಿಕ ಚುನಾವಣೆಯಲ್ಲಿ ಅದು ಯಾವುದೇ ಪರಿಣಾಮ ಬೀರಿರಲಿಲ್ಲ.
ಆಗ 28 ಲೋಕಸಭಾ ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ತುರ್ತು ಪರಿಸ್ಥಿತಿಯ ಪ್ರಭಾವ ರಾಜ್ಯದಲ್ಲಿ ಬೀರಲಿಲ್ಲ ಅನ್ನೋದನ್ನು ಮತದಾರರು ಸಾಬೀತುಪಡಿಸಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಟಿ.ಆರ್. ಶಾಮಣ್ಣ ಒಬ್ಬರೇ ಜನತಾ ಪರಿವಾರದ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದರು. ಇನ್ನುಳಿದ ಎಲ್ಲ 27 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದು ವಿಶೇಷ. ಉತ್ತರ ಭಾರತದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿತ್ತು. ಈ ಮಧ್ಯೆ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಎಡ ಪಕ್ಷಗಳ ಧೋರಣೆ ಹಾಗೆ ಮುಂದುವರಿದಿತ್ತು.
ರಾಜ್ಯದಲ್ಲಿ ಏರು-ಪೇರುಗಳ ನಡುವೆ ಸತತವಾಗಿ ಲೋಕಸಭೆಗೆ ಆಯ್ಕೆಗೊಂಡ ವಿವಿಧ ರಾಜಕೀಯ ಪಕ್ಷಗಳ ಚಿತ್ರಣ ಈ ರೀತಿ ಇದೆ. ಕರ್ನಾಟಕ ಇತಿಹಾಸದಲ್ಲಿ ಬಿ. ಶಂಕರಾನಂದ ಅವರು ಚಿಕ್ಕೋಡಿ ಕ್ಷೇತ್ರದಿಂದ ಸತತವಾಗಿ 7 ಬಾರಿ ಆಯ್ಕೆಯಾಗಿದ್ದರು. ಎಂಟನೇ ಬಾರಿಗೆ ಆಯ್ಕೆ ಬಯಸಿ ಪರಾಭವಗೊಂಡಿದ್ದರು. ಇವರನ್ನ ಬಿಟ್ಟರೆ ಆ ಮಟ್ಟದ ಹಿರಿಯ ರಾಜಕಾರಣಿ ಎಂದರೆ ಕೆ.ಹೆಚ್. ಮುನಿಯಪ್ಪ. ಕೋಲಾರ ಕ್ಷೇತ್ರದಿಂದ 1991 ರಿಂದ 2014 ರವರೆಗೂ ಸತತವಾಗಿ ಗೆದ್ದುಬಂದಿದ್ದು, ಈಗ ಮತ್ತೊಮ್ಮೆ ಪುನರಾಯ್ಕೆ ಬಯಸಿದ್ದಾರೆ. ಏಳು ಬಾರಿ ಸತತವಾಗಿ ಆಯ್ಕೆಯಾಗಿರುವ ಮುನಿಯಪ್ಪ ಎಂಟನೇ ಬಾರಿ ಆಯ್ಕೆಗೆ ಮತದಾರರು ಕೈಹಿಡಿಯುವರೇ ಎಂಬುದನ್ನು ಕಾದು ನೋಡಬೇಕಿದೆ. ಅತಿ ಹೆಚ್ಚು ಬಾರಿ ಹೆಚ್. ಚಂದ್ರಶೇಖರಮೂರ್ತಿ ಅವರು ಆಗಿನ ಕನಕಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ (ಈಗ ಬೆಂಗಳೂರು ಗ್ರಾಮಾಂತರವಾಗಿದೆ) ಆಯ್ಕೆಯಾಗಿದ್ದರು. ಇನ್ನು ಸೋಲಿಲ್ಲದ ಸರದಾರರೆಂದು ಖ್ಯಾತಿ ಗಳಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದು, ಈ ಬಾರಿಯೂ ಪುನರಾಯ್ಕೆ ಬಯಸಿದ್ದಾರೆ.
ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಘಟಾನುಘಟಿ, ಹ್ಯಾಟ್ರಿಕ್ ಬಾರಿಸಿದ ನಾಯಕರೇ ಕಣದಲ್ಲಿದ್ದಾರೆ. ಇನ್ನೂ ಕೆಲ ನಾಯಕರು ಹ್ಯಾಟ್ರಿಕ್ ಬಾರಿಸುವ ಹೊಸ್ತಿಲಲ್ಲಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಸನದಿಂದ ಸತತವಾಗಿ ಮೂರು ಬಾರಿ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ. ಚಂದ್ರಶೇಖರಮೂರ್ತಿ ಅವರು ನಿಧನದಿಂದ ತೆರವಾದ ಕನಕಪುರ ಕ್ಷೇತ್ರದಿಂದ ಒಮ್ಮೆ ದೇವೇಗೌಡರು ಗೆಲುವು ಸಾಧಿಸಿದ್ದರು. 1999 ರಲ್ಲಿ ಪರಾಭವಗೊಂಡಿದ್ದ ಅವರು ಕನಕಪುರ ಕ್ಷೇತ್ರ ರಾಜಕೀಯ ಮರುಜನ್ಮ ಪಡೆದುಕೊಂಡರು. ಇದೀಗ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಹಾಸನ ಕ್ಷೇತ್ರ ಬಿಟ್ಟುಕೊಟ್ಟು ತಮಕೂರು ಕ್ಷೇತ್ರಕ್ಕೆ ವಲಸೆ ಬಂದಿರುವ ದೊಡ್ಡಗೌಡರು ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ 2009 ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಡಿ.ಕೆ. ಸುರೇಶ್ ಆಯ್ಕೆಯಾಗಿದ್ದು, ಈಗ ಮೂರನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ನಾಲ್ಕು ಬಾರಿ ಆರ್.ಎಲ್. ಜಾಲಪ್ಪ ಆಯ್ಕೆಯಾಗಿದ್ದರು. 2009 ರಿಂದ ವೀರಪ್ಪ ಮೊಯ್ಲಿ ಸಂಸತ್ ಪ್ರವೇಶಿಸಿದ್ದು, ಈಗ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದಿಂದ ಸತತವಾಗಿ ಕಾಂಗ್ರೆಸ್ ಸಿ.ಕೆ. ಜಾಫರ್ ಶರೀಫ್ ಅವರು ಗೆದ್ದು ಬಂದಿದ್ದರು. ನಂತರ 96 ರಲ್ಲಿ ಜನತಾ ಪರಿವಾರದಿಂದ ನಾರಾಯಣಸ್ವಾಮಿ ಆಯ್ಕೆಯಾಗಿದ್ದರು. 2004 ರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹೆಚ್.ಟಿ. ಸಾಂಗ್ಲಿಯಾನ ಗೆಲುವು ಸಾಧಿಸಿದ್ದರು. 2009 ರಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದ ಡಿ.ಬಿ. ಚಂದ್ರೇಗೌಡ ಅವರು ಆಯ್ಕೆಯಾಗಿದ್ದರು. 2014 ರಲ್ಲಿ ಡಿ.ವಿ. ಸದಾನಂದಗೌಡರು ಗೆಲುವು ಸಾಧಿಸಿದ್ದು, ಈಗ ಮತ್ತೆ ಪುನರಾಯ್ಕೆ ಬಯಸಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1984, 1989, 1990, 1996 ರಲ್ಲಿ ಗೆದ್ದಿದ್ದರು. 1999 ಮತ್ತು 2004 ರಲ್ಲಿ ಬಿಜೆಪಿಯಲ್ಲಿದ್ದ ವಿಜಯಶಂಕರ್ ಗೆಲವು ಸಾಧಿಸಿದ್ದರು. ಈಗ ಕಾಂಗ್ರೆಸ್ ಗೆ ಸೇರಿ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ.
ಇನ್ನು ಚಾಮರಾಜನಗರ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಸಾದ್ ಹ್ಯಾಟ್ರಿಕ್ ಬಾರಿಸಿದ್ರು. 1980 ರಿಂದ 91 ರವರೆಗೆ ನಂತರ 99 ರಲ್ಲಿ ಆಯ್ಕೆಯಾಗದ್ದರು. 2004 ರಲ್ಲಿ ಶಿವಣ್ಣ ಗೆದ್ದಿದ್ದರು. 2009, 2014 ರಲ್ಲಿ ಧ್ರುವನಾರಾಯಣ ಗೆದ್ದಿದ್ದು, ಇವರು ಮೂರನೇ ಬಾರಿಗೆ ಮರು ಆಯ್ಕೆ ಬಯಸಿದ್ದರೆ, ಬಿಜೆಪಿಯಿಂದ ಸ್ಪರ್ಧಿಸಿರುವ ಶ್ರೀನಿವಾಸ್ ಪ್ರಸಾದ್ ಮತ್ತೊಮ್ಮೆ ಲೋಕಸಭಾ ಅಖಾಡಕ್ಕೆ ಧುಮುಕಿದ್ದಾರೆ.
ಈ ಬಾರಿ ಮಂಡ್ಯ ಜಿದ್ದಾಜಿದ್ದಿನ ಕಣವಾಗಿದೆ. 1998, 99 ಹಾಗೂ 2004 ರಲ್ಲಿ ನಟ ಅಂಬರೀಶ್ ಮಂಡ್ಯ ಲೋಕಸಭೆಗೆ ಆಯ್ಕೆಯಾಗದ್ರು. ಈ ಹಿಂದೆ ಜಿ. ಮಾದೇಗೌಡರು ಮೂರಿ ಬಾರಿ ಗೆದ್ದಿದ್ದರು. ಈಗ ನಟ ಅಂಬರೀಶ್ ಪತ್ನಿ ಸುಮಲತಾ ಅವರು ಕಣದಲ್ಲಿದ್ದು, ಎದುರಾಳಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸಿದ್ದಾರೆ.
ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ 1996 ರಿಂದಲೂ ನಿರಂತರವಾಗಿ ಅನಂತಕುಮಾರ್ ಅವರು ಗೆದ್ದು ಬಂದಿದ್ದರು. ಅವರ ಅಕಾಲಿಕ ನಿಧನದಿಂದ ಈಗ ಈ ಕ್ಷೇತ್ರಕ್ಕೆ ಯುವನಾಯಕ ತೇಜಸ್ವಿ ಸೂರ್ಯ ಎಂಟ್ರಿ ಆಗಿದ್ದಾರೆ. ಉಳಿದಂತೆ ಹ್ಯಾಟ್ರಿಕ್ ಹೊಸ್ತಿಲಲ್ಲಿರುವ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು ಈ ರೀತಿ ಇವೆ..
- ದಾವಣಗೆರೆ- ಜಿ.ಎಂ. ಸಿದ್ದೇಶ್ವರ, 3 ಬಾರಿ ಆಯ್ಕೆಯಾಗಿದ್ದು, 4 ನೇ ಬಾರಿಗೆ ಪುನರಾಯ್ಕೆ ಬಯಿಸಿದ್ದಾರೆ.
- ಧಾರವಾಡ- ಪ್ರಹ್ಲಾದ್ ಜೋಶಿ, 3 ಬಾರಿ ಆಯ್ಕೆಯಾಗಿದ್ದು, 4 ನೇ ಬಾರಿಗೆ ಕಣಕ್ಕಿಳಿದಿದ್ದಾರೆ.
- ಉತ್ತರ ಕನ್ನಡ- ಅನಂತಕುಮಾರ ಹೆಗಡೆ, 5 ಬಾರಿ ಗೆಲುವು ಸಾಧಿಸಿದ್ದು, 6 ನೇ ಬಾರಿಗೆ ಪುನರಾಯ್ಕೆ ಬಯಸಿದ್ದಾರೆ.
- ದಕ್ಷಿಣ ಕನ್ನಡ- ನಳೀನ್ ಕುಮಾರ್ ಕಟೀಲ್, 2 ಬಾರಿ ಗೆಲುವು, 3 ನೇ ಬಾರಿ ಸ್ಪರ್ಧೆ.
- ಬಾಗಲಕೋಟೆ- ಪಿ.ಸಿ. ಗದ್ದಿಗೌಡರ್, 3 ಬಾರಿ ಆಯ್ಕೆ, 4ನೇ ಬಾರಿಗೆ ಪುನರಾಯ್ಕೆಗೆ ಸ್ಪರ್ಧೆ .
- ಬೆಳಗಾವಿ- ಸುರೇಶ್ ಅಂಗಡಿ, 4 ನೇ ಬಾರಿ ಆಯ್ಕೆ ಬಯಸಿದ್ದಾರೆ.
- ಹಾವೇರಿ- ಶಿವಕುಮಾರ್ ಉದಾಸಿ, ಎರಡು ಬಾರಿ ಗೆಲುವು, 3ನೇ ಬಾರಿಗೆ ಪುನರಾಯ್ಕೆ ಬಯಸಿದ್ದಾರೆ.
- ಚಿಕ್ಕೋಡಿ- ಪ್ರಕಾಶ್ ಹುಕ್ಕೇರಿ, 2 ಬಾರಿಗೆ ಗೆಲುವು, 3 ನೇ ಬಾರಿಗೆ ಅಖಾಡಕ್ಕೆ.
- ಬೆಂಗಳೂರು ಸೆಂಟ್ರಲ್- ಪಿ.ಸಿ. ಮೋಹನ್ 2 ಬಾರಿ ಗೆದ್ದಿದ್ದು, 3 ನೇ ಬಾರಿ ಪೈಪೋಟಿ.
- ಚಿತ್ರದುರ್ಗ- ಚಂದ್ರಪ್ಪ, 2 ಬಾರಿ ಆಯ್ಕೆಯಾಗಿದ್ದು, ಈಗ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.