ಬೆಂಗಳೂರು : ಆಪರೇಷನ್ ರಿವರ್ಸ್ ಬಗ್ಗೆ ನಾನು ಹೇಳಿಕೆ ಕೊಡುವುದಿಲ್ಲ. ರಾಜಕೀಯದಲ್ಲಿ ಆ ರೀತಿ ಸನ್ನಿವೇಶ ಕಾಣ್ತಾ ಇದೆ. ಕಳೆದ ಲೋಕಸಭಾ ಚುನಾವಣೆ ನಂತರ ಮೈತ್ರಿ ಸರ್ಕಾರದ ಮೇಲೆ ಪ್ರಭಾವ ಬಿದ್ದಿತ್ತು. ಅದೇ ರೀತಿ ಬರುವ ಲೋಕಸಭಾ ಚುನಾವಣೆ ಫಲಿತಾಂಶದ ಪರಿಣಾಮ ಕೂಡ ಈ ಸರ್ಕಾರದ ಮೇಲೆ ಬೀಳಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾರು ಯಾರು ಮಾತಾಡಿದ್ದಾರೋ ಅವರ ಬಗ್ಗೆ ಕಮೆಂಟ್ ಮಾಡಲ್ಲ. ಮುಂದೆ ಲೋಕಸಭಾ ಚುನಾವಣೆ ಇದೆ. ಮೊನ್ನೆ ವಿಧಾನಸಭೆ ಚುನಾವಣೆ ಕೂಡ ಮುಗಿದಿದೆ. ಈ ಎರಡು ಚುನಾವಣೆಗಳ ನಡುವೆ ಈ ರೀತಿಯ ಹೇಳಿಕೆಗಳು ಬರುತ್ತಿರುವುದು ನೋಡಿದರೆ, ಹೇಳಿಕೆ ನೀಡುತ್ತಿರುವವರೇ ಎಲ್ಲವನ್ನೂ ಅವಲೋಕನ ಮಾಡುತ್ತಿದ್ದಾರೆ.
ಆದರೆ, ಫೈನಲಿ ಟೆಸ್ಟ್ ಏನು ಅಂದರೆ ಲೋಕಸಭಾ ಚುನಾವಣೆಯೇ. ಈ ಸರ್ಕಾರದ ಟೆಸ್ಟ್ ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಪುನರ್ ಸ್ಥಾಪನೆ ಆಗೋದಕ್ಕೆ ಈ ಫಲಿತಾಂಶ ಕಾರಣ ಆಗುತ್ತದೆ. ಒಂದೊಂದು ರೀತಿಯ ಚುನಾವಣೆ ಒಂದೊಂದು ರೀತಿಯ ಪ್ರಭಾವ ಬೀರುತ್ತದೆ. ಕಳೆದ ಲೋಕಸಭಾ ಚುನಾವಣೆ ನಂತರ ಮೈತ್ರಿ ಸರ್ಕಾರದ ಮೇಲೆ ಪ್ರಭಾವ ಬಿದ್ದಿತ್ತು. ಅದೇ ರೀತಿ ಬರುವ ಲೋಕಸಭಾ ಚುನಾವಣೆ ಫಲಿತಾಂಶದ ಪರಿಣಾಮ ಕೂಡ ಈ ಸರ್ಕಾರದ ಮೇಲೆ ಬೀಳಲಿದೆ. ಯಾರ ಯಾರ ಹೇಳಿಕೆ ಸತ್ಯ ಆಗುತ್ತೋ ಅಸತ್ಯ ಆಗುತ್ತೋ ಬರುವ ದಿನಗಳಲ್ಲಿ ಗೊತ್ತಾಗಲಿದೆ ಎಂದರು.
ಸನಾತನ ಧರ್ಮದ ಬಗ್ಗೆ ಓದುವ ಅವಶ್ಯಕತೆ ಇದೆ : ಉದಯನಿಧಿ ಸ್ಟಾಲಿನ್ ಹೇಳಿಕೆ ಅದು ಅವರ ಮನಸ್ಥಿತಿ ತೋರುತ್ತದೆ. ಅವರು ಸನಾತನ ಧರ್ಮದ ಬಗ್ಗೆ ಇನ್ನೂ ಓದುವ ಅವಶ್ಯಕತೆ ಇದೆ. ಸರ್ವ ಧರ್ಮ ಸಹಬಾಳ್ವೆ, ಸಕಲ ಜೀವಾತ್ಮಗಳಿಗೂ ಒಳ್ಳೆದಾಗಬೇಕು ಅನ್ನೋದು ಸನಾತನ ಧರ್ಮದ ಮೂಲ. ಸನಾತನ ಧರ್ಮವನ್ನು ವಿರೋಧ ಮಾತ್ರವಲ್ಲ ನಿರ್ಮೂಲನೆ ಮಾಡಬೇಕು ಅನ್ನೋ ಹೇಳಿಕೆ ಹಿಟ್ಲರ್ ಮೈಂಡ್ ಸೆಟ್ ಆಗಿದೆ. ಇದು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ಹೇಳಿಕೆ.
ಪ್ರಜಾಪ್ರಭುತ್ವ ಒಪ್ಪಿಕೊಂಡು ಪ್ರಮಾಣವಚನ ತೆಗೆದುಕೊಂಡು ಇಂತಹ ಹೇಳಿಕೆ ನೀಡಿರುವ ಅವರು ಸಚಿವರಾಗಿ ಮುಂದುವರೆಯೋಕೆ ಸಾಧ್ಯವಿಲ್ಲ. ಕೂಡಲೇ ಅವರನ್ನು ಸಂಪುಟದಿಂದ ತೆಗೆದುಹಾಕಬೇಕು. ಈ ಹೇಳಿಕೆಗೆ ಇಂಡಿಯಾ ಮಿತ್ರ ಪಕ್ಷಗಳು ವಿರೋಧ ಮಾಡಿಲ್ಲ. ಇಂಡಿಯ ಅನ್ನೋ ಒಕ್ಕೂಟ ಅಧಿಕಾರ ಹಿಡಿಯಲು ಏನೇನೋ ಮಾಡುತ್ತಿದೆ. ದೇಶದ ಏಕತ ಘನತೆ ಹಾಳಾದರೂ ಇವರಿಗೆ ಚಿಂತೆ ಇಲ್ಲ. ದೇಶದ ಜನರು ಇದನ್ನೆಲ್ಲ ನೋಡುತ್ತಿದ್ದಾರೆ ಎಂದು ಬೊಮ್ಮಾಯಿ ಇಂಡಿಯಾ ಒಕ್ಕೂಟವನ್ನು ಟೀಕಿಸಿದರು.
ಉಚಿತ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಪ್ರತಿಯೊಬ್ಬ ನಾಗರಿಕರ ಆದಾಯ ಹೆಚ್ಚಾಗಬೇಕು. ಉದ್ಯೋಗ ಹೆಚ್ಚಾಗಬೇಕು. ಹಾಗಾದಾಗ ದೇಶದ ಆರ್ಥಿಕತೆ ಅಭಿವೃದ್ಧಿಯಾಗುತ್ತದೆ. ಉಚಿತ ಯೋಜನೆಗಳು ಕೆಲ ಕಾಲಕ್ಕೆ ಮಾತ್ರ ಸೀಮಿತ. ಆ ನಂತರ ಸಮಸ್ಯೆ ಎದುರಾಗುತ್ತದೆ ಎಂದರು.
ವಿದ್ಯುತ್ ಕ್ಷಾಮ ಎದುರಾಗಿದೆ : ಲೋಡ್ ಶೆಡ್ಡಿಂಗ್ ವಿಚಾರ ಕುರಿತು ಮಾತನಾಡಿ ಮಾಜಿ ಸಿಎಂ, ಬೆಂಗಳೂರಿನಲ್ಲಿ ಮಾತ್ರವಲ್ಲ ಇಡೀ ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ ಆಗುತ್ತಿದೆ. ರಾತ್ರಿ ಹೊತ್ತು ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ. ಸರ್ಕಾರ ವಿದ್ಯುತ್ ನಿಗಮಗಳಿಗೆ ಬೆಂಬಲ ನೀಡಬೇಕು. ನಮ್ಮ ಸರ್ಕಾರ ಇದ್ದಾಗ ರಾತ್ರಿ ಹೊತ್ತು ಕೂಡ ಲೋಡ್ ಶೆಡ್ಡಿಂಗ್ ಆಗದಂತೆ ನೋಡಿಕೊಂಡಿದ್ದೇವೆ. ಆದರೆ,ಇವರು ರಾತ್ರಿ ವೇಳೆ ಸಮರ್ಪಕ ವಿದ್ಯುತ್ ನೀಡಲು ವಿಫಲರಾಗಿದ್ದಾರೆ. ಇದು ಸರ್ಕಾರದ ಆಡಳಿತ ಯಂತ್ರ ಹೇಗಿದೆ ಎಂದು ತೋರುತ್ತದೆ. ವಿದ್ಯುತ್ ಉತ್ಪಾದಕರಿಗೆ ದುಡ್ಡು ಕೊಡುತ್ತಿಲ್ಲ. ವಿದ್ಯುತ್ ಕ್ಷಾಮ ರಾಜ್ಯದಲ್ಲಿ ಆವರಿಸಿದೆ. ಮಳೆ ಬರದೆ ಕುಡಿಯುವ ನೀರಿನ ಕ್ಷಾಮ ಎದುರಾಗಿದೆ. ಅದರ ಜೊತೆಗೆ ವಿದ್ಯುತ್ ಕ್ಷಾಮ ಎದುರಾಗಿದೆ. ಹಣಕಾಸಿನ ಅಸಮರ್ಪಕ ನಿರ್ವಹಣೆ ಇದಕ್ಕೆ ಮೂಲ ಕಾರಣ ಎಂದು ದೂರಿದರು.
ಕಾವೇರಿ ವಿಚಾರದಲ್ಲಿ ಸರ್ಕಾರ ಎಡವಿದೆ : ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಲಿದೆ. ಸರ್ಕಾರ ಆರಂಭದಿಂದಲೇ ಇದರ ನಿರ್ವಹಣೆ ಮಾಡಬೇಕಿತ್ತು. ರೈತರಿಗೆ ನೀರು ಬಿಟ್ಟಿಲ್ಲ. ಕೆರೆಗಳಿಗೆ ನೀರು ತುಂಬಿಸಿಲ್ಲ. ತಮಿಳುನಾಡಿಗೆ ನೀರು ಬಿಡಲಾಗಿದೆ. ಸರ್ವ ಪಕ್ಷ ಸಭೆಯಲ್ಲೂ ಈ ಬಗ್ಗೆ ಹೇಳಿದ್ದೆವು. 15 ಸಾವಿರ ಕ್ಯೂಸೆಕ್ ನೀರು ಬಿಡಲು ಪ್ರಾಧಿಕಾರ ಹೇಳಿದೆ. 10 ಸಾವಿರಕ್ಕೆ ನಾವು ಒತ್ತಾಯಿಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದ್ದರು. ಹಾಗಾದರೆ 10 ಸಾವಿರಕ್ಕೆ ನಿಮಗೆ ಖುಷಿ ಇದ್ಯಾ ಎಂದು ಪ್ರಶ್ನೆ ಮಾಡಿದ್ದೆವು, ಸರ್ಕಾರ ಈ ವಿಚಾರದಲ್ಲಿ ಸಂಪೂರ್ಣ ಎಡವಿದೆ ಎಂದು ಆರೋಪಿಸಿದರು.
ಪಡಿತರ ಅಕ್ಕಿ ಬದಲು ಹಣ ನೀಡುವಲ್ಲೂ ವಿಳಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಅನ್ನಭಾಗ್ಯ ಯೋಜನೆಯಡಿ ಹಣ ಡಿಬಿಟಿಯಾಗುತ್ತಿಲ್ಲ. ಸರ್ಕಾರ ಅಕ್ಕಿಯನ್ನೂ ಕೊಟ್ಟಿಲ್ಲ ಕೇಂದ್ರ ಸರ್ಕಾರ ಕೊಡುವ ಅಕ್ಕಿಯಲ್ಲೂ 2 ಕೆಜಿ ಕಡಿತ ಮಾಡಿದೆ. 35 ಲಕ್ಷ ಜನರನ್ನು ಹೊರಗಿಟ್ಡಿದ್ದಾರೆ. ಹಣ ಕೊಡಲು ಈಗ ನೆಪ ಹುಡುಕುತ್ತಿದ್ದಾರೆ. ಏನಾದರು ಕಾರಣ ಹೇಳಿ ಇದೇ ರೀತಿ ವಿಳಂಬ ಮಾಡುತ್ತಾರೆ ಎಂದು ನಾನು ಮೊದಲೇ ಹೇಳಿದೆ. ಸುಮ್ಮನೆ ಪಡಿತರದಾರರ ಕಾರ್ಡ್ ಪರಿಶೀಲನೆ ಅಂತ ಕಾರಣ ಹೇಳುತ್ತಾರೆ. ಗೃಹಲಕ್ಷ್ಮಿ ಯೋಜನೆಯಲ್ಲೂ ಇದೇ ರೀತಿ ಆಗಲಿದೆ. ಫಲಾನುಭವಿಗಳಿಗೆ ಹಣ ತಲುಪುವುದಿಲ್ಲ. ಆರ್ಥಿಕ ಶಿಸ್ತು ಇಲ್ಲದ ಕಾರಣ ಹೀಗೆ ಆಗುತ್ತಿದೆ ಎಂದು ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಸಿದ್ದರಾಮಯ್ಯ ಲಾಟರಿ ಮುಖ್ಯಮಂತ್ರಿ : ಕೆ ಎಸ್ ಈಶ್ವರಪ್ಪ ವಾಗ್ದಾಳಿ