ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ತೀವ್ರತೆ ಹೆಚ್ಚಾಗುತ್ತಿದೆ. ಫೆಬ್ರವರಿ ಮೊದಲ ವಾರ ರಾಜ್ಯಕ್ಕೆ ಕೊರೊನಾ ಸಂಕಷ್ಟ ಎದುರಾಗಲಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿ ಇಲ್ಲ:
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಇದಕ್ಕೆ ಲಾಕ್ಡೌನ್ ಪರಿಹಾರ ಅಲ್ಲ. ಪ್ರಧಾನಿಗಳು ಕೂಡ ಅದನ್ನೇ ಹೇಳಿದ್ದಾರೆ. ಜನ ಕೂಡ ಸಹಕಾರ ಕೊಡಬೇಕು. ಎಲ್ಲರೂ ಕೋವಿಡ್ ನಿಯಮ ಪಾಲನೆ ಮಾಡಬೇಕು. ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಈ ತಿಂಗಳ(ಜನವರಿ) ಕೊನೆಯವರೆಗೂ ಸರ್ಕಾರ ಬಿಡುಗಡೆ ಮಾಡಿದ ಮಾರ್ಗಸೂಚಿ ಮುಂದುವರಿಯುತ್ತದೆ. ಈಗ ಇರುವ ಹೊಸ ಪ್ರಬೇಧದ ಸೋಂಕು ಹರಡುವ ಪ್ರಮಾಣ ಹೆಚ್ಚಾಗಿದೆ. ಆದ್ದರಿಂದ ಯಾರು ನಿರ್ಲಕ್ಷ್ಯ ಮಾಡಬೇಡಿ. ಕೋವಿಡ್ ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಲಾಕ್ಡೌನ್ ಮಾಡುವುದು ಸರಿಯಲ್ಲ. ಲಾಕ್ಡೌನ್ ಮಾಡಿದರೆ ಜನ ಸಾಮಾನ್ಯರಿಗೆ ತುಂಬಾ ತೊಂದರೆಯಾಗಲಿದೆ ಎಂದರು.
ಇಂದಿನಿಂದ 2ನೇ ವಾರದ ವೀಕೆಂಡ್ ಕರ್ಫ್ಯೂ:
ಇಂದಿನಿಂದ 2ನೇ ವಾರದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಈ ತಿಂಗಳು (ಜನವರಿ) ನಿಯಮ ಮುಂದುವರೆಯುತ್ತದೆ. ಜನರು ಸಹಕಾರ ನೀಡಬೇಕು. ಅನೇಕ ಜಿಲ್ಲೆಯಲ್ಲಿ ಸೋಂಕು ಹೆಚ್ಚುತ್ತಿದೆ. ಯಾರೂ ಉದಾಸೀನ ಮಾಡಬಾರದು. ನಿರ್ಲಕ್ಷ್ಯ ಮಾಡಬೇಡಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ. ಹಾಗೇ ಬೂಸ್ಟರ್ ಡೋಸ್ ಅರ್ಹತೆ ಇರುವವರು ಲಸಿಕೆ ತೆಗೆದುಕೊಳ್ಳಿ. 2ನೇ ಡೋಸ್ 40 ಲಕ್ಷ ಜನ ತಗೆದುಕೊಳ್ಳಬೇಕು. ಶೀಘ್ರ ಲಸಿಕೆ ಪಡೆಯಿರಿ ಎಂದು ಸಚಿವರು ಮನವಿ ಮಾಡಿದರು.
ರಾಜ್ಯದಲ್ಲಿ ಕೊರೊನಾ ಇನ್ನು ಪೀಕ್ಗೆ ಹೋಗಿಲ್ಲ. ತಜ್ಞರು ಕೂಡಾ ಇದನ್ನ ಹೇಳಿದ್ದಾರೆ. ಫೆಬ್ರವರಿ ಮೊದಲ ವಾರ ಪೀಕ್ಗೆ ಹೋಗುತ್ತದೆ. 3-4ನೇ ವಾರದಿಂದ ಕಡಿಮೆ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ರಾಜ್ಯದಲ್ಲಿ ಸೋಂಕು ದಿನೇ ದಿನೆ ಹೆಚ್ಚಳವಾಗ್ತಿದೆ. ಆದರೂ ಶೇ. 5 - 6 ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದು ಸಮಾಧಾನಕರ ವಿಷಯ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಲಾಕ್ ಡೌನ್ ಇಲ್ಲ, ಕಠಿಣ ನಿಯಮ ಮುಂದುವರಿಕೆ: ಆರಗ ಜ್ಞಾನೇಂದ್ರ ಸ್ಪಷ್ಟನೆ