ಬೆಂಗಳೂರು: ಕೋವಿಡ್ 19 ಲಾಕ್‌ಡೌನ್ ವೇಳೆ ಸಂಕಷ್ಟಕ್ಕೊಳಗಾದ ವಿವಿಧ ವರ್ಗದ ಜನರಿಗೆ ರಾಜ್ಯ ಸರ್ಕಾರ 1,777 ಕೋಟಿ ರೂ. ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ವಿಶೇಷ ಪ್ಯಾಕೇಜ್ ಘೋಷಿಸಿ ಎರಡೂವರೆ ತಿಂಗಳಾಗಿದ್ದು, ಸಂಕಷ್ಟದಲ್ಲಿರುವ ವಿವಿಧ ಸಂತ್ರಸ್ತರಿಗೆ ಈವರೆಗೆ ನೀಡಿದ ಪರಿಹಾರ ಎಷ್ಟು ಎಂಬ ಬಗ್ಗೆ ವರದಿ ಇಲ್ಲಿದೆ.
ಲಾಕ್‌ಡೌನ್ ವೇಳೆ ಕಾರ್ಮಿಕರು, ರೈತರು, ಆಟೋ, ಕ್ಯಾಬ್ ಚಾಲಕರು ದುಡಿಮೆ ಇಲ್ಲದೇ ಸಾಕಷ್ಟು ಸಂಕಷ್ಟಕ್ಕೊಳಗಾಗಿದ್ದರು. ಆ ಸಂದರ್ಭ ಸರ್ಕಾರ ಸಂಕಷ್ಟಕ್ಕೊಳಗಾದ ನೊಂದವರ ನೆರವಿಗೆ ಬಂದಿತ್ತು. ಅವರಿಗಾಗಿ ರಾಜ್ಯ ಸರ್ಕಾರ 1,777 ಕೋಟಿ ರೂ.ನ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಮೇ ಮೊದಲ ವಾರದಲ್ಲಿ ಸಿಎಂ ಯಡಿಯೂರಪ್ಪ ಸಂಕಷ್ಟಕ್ಕೊಳಗಾದ ವಿವಿಧ ವರ್ಗದವರಿಗೆ ಸಹಾಯ ಹಸ್ತ ಚಾಚಿದರು.
ಯಾರಿಗೆ ಎಷ್ಟು ಪರಿಹಾರ ಘೋಷಣೆ?:
ಹೂ ಬೆಳೆಗಾರರಿಗೆ ನೆರವಾಗಲು ಹೆಕ್ಟೇರ್‌ಗೆ ಗರಿಷ್ಟ 25,000 ರೂ.ಗಳಂತೆ ಪರಿಹಾರ, ಪಾರಂಪರಿಕ ವೃತ್ತಿನಿರತ 2,30,000 ಕಾರ್ಮಿಕರು ಮತ್ತು 60,000 ಮಡಿವಾಳರು, 7,75,000 ಟ್ಯಾಕ್ಸಿ ಚಾಲಕರು ಮತ್ತು ಆಟೋ ಚಾಲಕರಿಗೆ ತಲಾ 5000 ರೂ.ಗಳ ಪರಿಹಾರವನ್ನು ಮೊದಲ ಹಂತದಲ್ಲಿ ಸರ್ಕಾರ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿತ್ತು.ಇನ್ನು 15.80 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಈಗಾಗಲೇ ನೀಡಿರುವ ತಲಾ 2000 ರೂ.ಗಳ ಜೊತೆ 3000 ರೂ.ಗಳನ್ನು ಸೇರಿಸಿ ಒಟ್ಟು 5000 ರೂ. ಪರಿಹಾರ ಘೋಷಣೆ ಮಾಡಲಾಗಿತ್ತು. ಎರಡನೇ ಪ್ಯಾಕೇಜ್ ನಲ್ಲಿ ಹಣ್ಣು ಮತ್ತು ತರಕಾರಿ ಬೆಳೆಗಾರರು ಹೆಕ್ಟೇರ್‌ಗೆ ಗರಿಷ್ಟ 15,000 ರೂ.ಗಳಂತೆ ಒಟ್ಟು 137 ಕೋಟಿ ರೂ.ಗಳ ಪರಿಹಾರ ಘೋಷಿಸಲಾಗಿತ್ತು. ಅದೇ ರೀತಿ ವಿದ್ಯುತ್ ಚಾಲಿತ ಮಗ್ಗ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಒಟ್ಟು 1.25 ಲಕ್ಷ ಕೆಲಸಗಾರರಿಗೆ ಒಂದು ಬಾರಿಗೆ ತಲಾ 2000 ರೂ. ಗಳಂತೆ ಒಟ್ಟು 25 ಕೋಟಿ ರೂ. ನೀಡಲು ನಿರ್ಧರಿಸಿತ್ತು.
ಈವರೆಗೆ ಪಾವತಿಸಿದ ಪರಿಹಾರ ಹಣ ಎಷ್ಟು?:
ಕಾರ್ಮಿಕರಿಗೆ ಪಾವತಿಸಿದ ಹಣ:
ಸರ್ಕಾರ ಈವರೆಗೆ 16,32,328 ಕಾರ್ಮಿಕರಿಗೆ ತಲಾ 5,000 ರೂ.ಗಳಂತೆ ಒಟ್ಟು 816.16 ಕೋಟಿ ರೂ. ಸಹಾಯಧನವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಇಲ್ಲದ ಕಾರ್ಮಿಕರಿಗೆ ಪರಿಹಾರ ಹಣ ನೀಡುವಲ್ಲಿ ವಿಳಂಬವಾಗಿದೆ.ಇನ್ನು ಲಾಕ್‌ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಸುಮಾರು 60,000 ಅಗಸರು ಹಾಗೂ 2,30,000 ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದು ಬಾರಿ ಪರಿಹಾರವಾಗಿ 5000 ರೂ.ನೆರವನ್ನು ಘೋಷಿಸಲಾಗಿತ್ತು. ಆ ಪೈಕಿ ಈವರೆಗೆ 61,817 ಆಗಸರು ಮತ್ತು 60,754 ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ಒಟ್ಟು 1,22,571 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದ್ದು, ಹಣ ಇನ್ನೂ ಬಿಡುಗಡೆ ಮಾಡಿಲ್ಲ.
ಚಮ್ಮಾರರಿಗೆ ಪಾವತಿಸಿದ ಪರಿಹಾರ ಹಣ:
ಲಾಕ್ಡೌನ್ನಿಂದ ತೊಂದರೆಗೊಳಗಾದ ಚರ್ಮ ಕುಶಲ ಕರ್ಮಿಗಳಿಗೆ ಸರ್ಕಾರ 5,000 ರೂ. ಧನ ಸಹಾಯವನ್ನು ಘೋಷಿಸಿತ್ತು. ಈ ಸಂಬಂಧ ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಒಟ್ಟು 11,421 ಚಮ್ಮಾರರಿಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಪಾವತಿಸಲಾಗಿದೆ. ಒಟ್ಟು 5.70 ಕೋಟಿ ರೂ. ಪರಿಹಾರ ಹಣ ಪಾವತಿಸಿದೆ.
ಮುಸುಕಿನ ಮೆಕ್ಕೆ ಜೋಳ ರೈತರಿಗೆ ಕೊಟ್ಟ ಪರಿಹಾರ:
ಇತ್ತ ಸರ್ಕಾರ ಲಾಕ್ ಡೌನ್ ಸಂಕಷ್ಟಕ್ಕೊಳಗಾದ ಮುಸುಕಿನ ಜೋಳ ಬೆಳೆದ ರೈತರಿಗೆ 5000 ರೂ.ರಂತೆ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರ 500 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿತ್ತು. ಜುಲೈ ಮೊದಲ ವಾರದವರೆಗೆ ಒಟ್ಟು 5.52 ಲಕ್ಷ ಫಲಾನುಭವಿ ರೈತರ ಖಾತೆಗಳಿಗೆ 276 ಕೋಟಿ ರೂ. ಪರಿಹಾರ ಮೊತ್ತವನ್ನು ನೇರ ನಗದು ವರ್ಗಾವಣೆ ಮಾಡಲಾಗಿದೆ.
ಹೂ ಬೆಳೆಗಾರರಿಗೆ ನೀಡಿದ ಹಣ ಎಷ್ಟು?:
ಲಾಕ್ ಡೌನ್ ಅವಧಿಯಲ್ಲಿ ರಾಜ್ಯದ ಹೂ ಬೆಳೆದ ರೈತರಿಗೆ ಉಂಟಾದ ನಷ್ಟಕ್ಕೆ ಹೆಕ್ಟೇರ್‌ಗೆ ಗರಿಷ್ಠ 25,000 ರೂ. ಗಳಂತೆ ಪರಿಹಾರ ಘೋಷಿಸಲಾಗಿದೆ. ಹೂವಿನ ಬೆಳೆ ಬೆಳೆದಿರುವ ಒಟ್ಟು 12,735 ಹೆಕ್ಟೇರ್ ಪ್ರದೇಶಕ್ಕೆ ತಗಲುವ ಒಟ್ಟು 31.83 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದುವರೆಗೆ 14.33 ಕೋಟಿ ರೂ. ಪರಿಹಾರ ಮೊತ್ತ ರೈತರ ಖಾತೆಗೆ ಜಮೆ ಮಾಡಾಗಿದೆ.ಇನ್ನು ರಾಜ್ಯದ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಪರಿಹಾರವಾಗಿ ಹೆಕ್ಟೇರ್‌ಗೆ 15,000 ರೂ. ಗಳಂತೆ ಘೋಷಿಸಲಾಗಿತ್ತು. ಈ ಸಂಬಂಧ 137 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಸುಮಾರು 10 ಲಕ್ಷ ಹೂ, ತರಕಾರಿ ಬೆಳೆಗಾರರ ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ.
ಆಟೋ, ಕ್ಯಾಬ್ ಚಾಲಕರಿಗೆ ಕೊಟ್ಟ ಹಣ:
ಲಾಕ್‌ಡೌನ್ ನಿಂದ ಸಂಕಷ್ಟಕ್ಕೊಳಗಾದ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೂ ಸರ್ಕಾರ ವಿಶೇಷ ಪರಿಹಾರ ಘೋಷಿಸಿತ್ತು.ರಾಜ್ಯದಲ್ಲಿನ 7,75,000 ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ ಪ್ರತಿಯೊಬ್ಬರಿಗೂ 5,000 ರೂ.ರಂತೆ ಪರಿಹಾರ ಘೋಷಿಸಲಾಗಿತ್ತು. ಇದಕ್ಕಾಗಿ 387.50 ಕೋಟಿ ರೂ. ಘೋಷಿಸಲಾಗಿತ್ತು. ಈವರೆಗೆ 1,14,341 ಫಲಾನುಭವಿಗಳಿಗೆ 5,717 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.