ಬೆಂಗಳೂರು: ಕೊರೊನಾ ಲಾಕ್ ಡೌನ್ ಇದೀಗ ಅನ್ನದಾತರನ್ನೂ ಸಂಕಷ್ಟಕ್ಕೀಡು ಮಾಡುತ್ತಿದೆ. ಬೆಳೆದ ಬೆಳೆ ಕಟಾವು ಮಾಡಲು ಜನರಿಲ್ಲದೇ ಮಾರಾಟನೂ ಆಗದೆ ನಾಶವಾಗುತ್ತಿರುವುದು ರೈತರನ್ನು ಕಂಗೆಡೆಸಿದೆ. ಈ ನಿಟ್ಟಿನಲ್ಲಿ ರೈತ ಸಂಘಟನೆಗಳ ನಿಯೋಗ ಸಿಎಂನ್ನು ಭೇಟಿಯಾಗಲು ನಿರ್ಧರಿಸಿದೆ.
ಕೊರೊನಾ ಲಾಕ್ಡೌನ್ನಿಂದ ಇದೀಗ ರಾಜ್ಯದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಾವು ಬೆಳೆದ ಬೆಳೆಯನ್ನು ಕಠಾವು ಮಾಡಲಾಗದೆ, ಮಾರಾಟ ಮಾಡಲಾಗದೆ, ಬೆಲೆ ಕುಸಿತದಿಂದ ಕಂಗಾಲಾಗಿ ಹೋಗಿದ್ದಾರೆ. ಕೃಷಿ ಚಟುವಟಿಕೆಗೆ ಯಾವುದೇ ಬ್ರೇಕ್ ಬಿದ್ದಿಲ್ಲವಾದರೂ, ಕಾರ್ಮಿಕರಿಲ್ಲದೇ, ಬೇಡಿಕೆ ಇಲ್ಲದೆ, ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲದೆ ಕೋಟ್ಯಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ.
ಕೊರೊನಾದಿಂದ ಆಗಿರುವ ನಷ್ಟ ಏನು?
- ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಾವಿರಾರು ಟನ್ ದ್ರಾಕ್ಷಿ ಬೆಳೆದಿದ್ದು, ಈಗ ಕಟಾವು ಮಾಡಬೇಕಿದೆ. ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲು ಆಗುತ್ತಿಲ್ಲ ಮತ್ತು ಬೆಲೆಯೂ ಇಲ್ಲ. 10 ದಿನದಲ್ಲಿ ಕಟಾವು ಮಾಡದಿದ್ದರೆ ಸಂಪೂರ್ಣವಾಗಿ ನಷ್ಟವಾಗಲಿದೆ.
- ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹೆಚ್ಚು ರೇಷ್ಮೆ ಬೆಳೆ ಬೆಳೆಯುತ್ತಾರೆ. ಮಾರುಕಟ್ಟೆಗಳು ಪ್ರಾರಂಭವಾಗಿದ್ದರೂ ಬೆಲೆ 500 ರೂ.ಗಳಿಂದ 200 ರೂ.ಗಳಿಗೆ ಇಳಿದಿದೆ. ರೇಷ್ಮೆ ಕೊಳ್ಳುವವರೇ ಇಲ್ಲದಂತಾಗಿದೆ. ರೇಷ್ಮೆ ಗೂಡು ಬೆಲೆ ಕೆ.ಜಿಗೆ 400 ರೂ. ನಿಂದ 150 ರೂ.ಗೆ ಇಳಿಕೆಯಾಗಿದೆ.
- ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸುಮಾರು 2000 ಟನ್ ಬ್ಯಾಡಗಿ ಮೆಣಸಿನ ಕಾಯಿ ಬೆಳೆಯಲಾಗಿದೆ. ಈಗ ಎಲ್ಲಾ ರೈತರು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು. ಆದರೆ ಮಾರುಕಟ್ಟೆಯಲ್ಲಿ ಬೆಲೆಯು ತೀವ್ರ ಕುಸಿತ ಕಂಡಿದೆ.
- ಶಿವಮೊಗ್ಗ, ಉತ್ತರ ಕನ್ನಡ, ಮೈಸೂರು ಮತ್ತು ಚಾಮರಾಜನಗರದಲ್ಲಿ ಶುಂಠಿ ಬೆಳೆಯನ್ನು ಬೆಳೆದಿರುತ್ತಾರೆ. ಈಗ ಶುಂಠಿ ಕಟಾವು ಮಾಡಿದ್ದು, ಈ ಬೆಳೆಯ ಮಾರುಕಟ್ಟೆ ಹೈದರಾಬಾದ್, ದೆಹಲಿ ಇನ್ನು ಮುಂತಾದ ಕಡೆಗಳಲ್ಲಿ ಇದ್ದು ಸಾಗಣೆ ಮಾಡಲು ಆಗದೆ ತೋಟಗಳಲ್ಲಿ ಉಳಿದಿವೆ. ಶುಂಠಿ ತೆಗೆದ ಮೇಲೆ ಒಂದು ವಾರದಲ್ಲಿ ಮಾರಾಟ ಮಾಡಬೇಕು ಇಲ್ಲದಿದ್ದರೆ ರೈತರು ನಷ್ಟ ಅನುಭವಿಸಲಿದ್ದಾರೆ.
- ರಾಜ್ಯದ ಸುಮಾರು 15 ಜಿಲ್ಲೆಗಳಲ್ಲಿ ಮೆಕ್ಕೆ ಜೋಳ ಬೆಳೆದಿರುತ್ತಾರೆ. 2,200 ರೂ.ಗಳಿದ್ದ ಬೆಲೆಯು ಇದೀಗ 700 - 800 ರೂ.ಗಳಿಗೆ ಕುಸಿದಿದೆ. ಬಾಳೆ ಬೆಳೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಈಗ ಮಾರುಕಟ್ಟೆ ಇಲ್ಲದ ಕಾರಣ ಕಟಾವಿಗೆ ಬಂದಿರುವ ಬಾಳೆಯನ್ನು ಕಟಾವು ಮಾಡಲು ಆಗದೆ ಕೊಳೆತು ಹೋಗುತ್ತಿದೆ.
- ಕಾಫಿ, ಟೀ ಮತ್ತು ಸಾಂಬಾರು ಪದಾರ್ಥಗಳಿಗೆ ಮಾರುಕಟ್ಟೆ ಇಲ್ಲದೆ ಬೆಲೆಯಲ್ಲಿ ಶೇ 50ರಷ್ಟು ಕುಸಿತ ಕಂಡಿದೆ. ಹಣ್ಣು, ತರಕಾರಿ ಬೆಳೆಗಾರರು ಮಾರುಕಟ್ಟೆ ಇಲ್ಲದೆ ಬೆಳೆದಿರುವ ಬೆಳೆಗಳನ್ನು ಚೆಲ್ಲುವಂತಾಗಿದೆ.
- ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಸುಮಾರು 4,000 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡಿವೆ. ಕೊರೊನಾದಿಂದ ಸಕ್ಕರೆ ರಪ್ತು ಸಾಧ್ಯವಾಗದೇ ಹಣ ಪಾವತಿಸಲು ಅಸಾಧ್ಯವಾಗಿದೆ.
- ಬೆಂಬಲ ಬೆಲೆಯಡಿ ಸುಮಾರು 37,000 ಮೆಟ್ರಿಕ್ ಟನ್ ಭತ್ತ ಖರೀದಿಸಿದರೂ ರೈತರಿಗೆ ಇನ್ನೂ ಹಣ ಪಾವತಿ ಮಾಡಿಲ್ಲ.
ಇತ್ತ ಕೊರೊನಾ ಹಿನ್ನೆಲೆ ರೈತರು ಸುಮಾರು 50,000 ಕೋಟಿ ರೂ.ಗೂ ಹೆಚ್ಚು ನಷ್ಟ ಅನುಭವಿಸಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಘೋಷಿಸಿದಂತೆ ಕಿಸಾನ್ ಸಮ್ಮಾನ್ ಯೋಜನೆಯಡಿ ಎರಡು ಸಾವಿರ ರೂ. ರಾಜ್ಯದ ಪಾಲನ್ನೂ ಮುಂಗಡವಾಗಿ ನೀಡುವಂತೆ ಒತ್ತಾಯಿಸಿದ್ದಾರೆ. ಅತಿವೃಷ್ಟಿಗಿಂತಲೂ ಹೆಚ್ಚಿಗೆ ನಷ್ಟ ಆಗಿದ್ದು, ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಲು ಸಿಎಂ ಬಳಿ ಶೀಘ್ರವೇ ನಿಯೋಗ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.