ಬೆಂಗಳೂರು: ಗಲಭೆಯಲ್ಲಿ ಸದ್ಯದ ಮಟ್ಟಿಗೆ ಸ್ಥಳೀಯ ರಾಜಕಾರಣಿಗಳ ಪಾತ್ರ ಇದೆ ಎನ್ನುವುದು ಗೊತ್ತಾಗಿದೆ. ಅವರನ್ನು ಬಂಧಿಸಲಾಗಿದೆ. ಆದ್ರೆ ಈ ಘಟನೆಯಲ್ಲಿ ದೊಡ್ಡ ರಾಜಕಾರಣಿಗಳ ಕೈವಾಡ ಇದೆಯಾ ಎನ್ನುವುದು ತನಿಖೆ ಮೂಲಕ ಗೊತ್ತಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆಗಸ್ಟ್ 15ರವರೆಗೆ ಕರ್ಫ್ಯೂ...
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿದೆ. ಆಗಸ್ಟ್ 15ರವರೆಗೆ ಕರ್ಫ್ಯೂ ವಿಸ್ತರಣೆ ಮಾಡಲಾಗಿದೆ ಎಂದರು.
ಎಫ್ಐಆರ್ ವಿಳಂಬವಾಗಿಲ್ಲ...
ಆರೋಪಿ ನವೀನ್ ವಿರುದ್ಧ ಕೂಡಲೇ ಎಫ್ಐಆರ್ ದಾಖಲು ಮಾಡಬೇಕಾಗಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಮೊನ್ನೆ ಸಂಜೆ 5.40ಕ್ಕೆ ನವೀನ್ ಪೋಸ್ಟ್ ಮಾಡಿದ್ದ. ಫಿರೋಜ್ ಪಾಷಾ ಎನ್ನುವವರು 7.15ಕ್ಕೆ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. 7.45ಕ್ಕೆ ಎಫ್ಐಆರ್ ದಾಖಲು ಮಾಡಲಾಗಿದೆ. ಎಫ್ಐಆರ್ ದಾಖಲು ಮಾಡುವಲ್ಲಿ ವಿಳಂಬ ಆಗಿಲ್ಲ. ಪ್ರಕರಣದ ದಾರಿ ತಪ್ಪಿಸಲು ವಿಳಂಬ ಎನ್ನುವ ಆರೋಪ ಮಾಡಲಾಗುತ್ತಿದೆ ಎಂದರು.
ಸ್ಥಳೀಯ ರಾಜಕಾರಣದ ಲೆಕ್ಕಾಚಾರ, ಭಿನ್ನಾಭಿಪ್ರಾಯವೇ ಗಲಭೆಗೆ ಕಾರಣ!
ನವೀನ್ ಸುರಕ್ಷತೆಗಾಗಿ ಅಂದು ರಾತ್ರಿ ಆತನನ್ನು ಠಾಣೆಗೆ ಕರೆ ತಂದಿರಲಿಲ್ಲ. ಠಾಣೆ ಬಳಿ ಬಂದಿದ್ದ ಜನರು ನವೀನನನ್ನು ನಮ್ಮ ಕೈಗೆ ಕೊಡಿ ಎಂದು ಒತ್ತಾಯ ಮಾಡಿದ್ದರು. ಆದರೆ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಒಂದು ವೇಳೆ ನವೀನ್ ಅವರ ಕೈಗೆ ಸಿಕ್ಕಿದ್ದರೆ ಏನಾಗುತ್ತಿತ್ತು ಎಂದು ನೀವೇ ಊಹಿಸಿಕೊಳ್ಳಬಹುದು. ಎಫ್ಐಆರ್ ದಾಖಲು ಮಾಡಿದರೂ ಗಲಭೆ ನಡೆಯಿತು. ಘಟನೆಗೆ ಸ್ಥಳೀಯ ರಾಜಕಾರಣದ ಲೆಕ್ಕಾಚಾರಗಳು, ಭಿನ್ನಾಭಿಪ್ರಾಯಗಳು, ಮುಂದಿನ ರಾಜಕೀಯ ಲೆಕ್ಕಾಚಾರಗಳು ಕಾರಣ ಎಂದು ಆರೋಪಿಸಿದರು.
ಎಸ್ಡಿಪಿಐ ಪಾತ್ರದ ಬಗ್ಗೆ ತನಿಖೆ...
ಎಸ್ಡಿಪಿಐ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ಶಂಕೆ ಇರುವ ಸ್ಥಳೀಯ ಪಾಲಿಕೆ ಸದಸ್ಯರನ್ನು ವಿಚಾರಣೆ ಮಾಡಲಾಗುತ್ತಿದೆ. ಗಲಭೆಕೋರರ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತದೆ. ಪಾಲಿಕೆ ಸದಸ್ಯೆ ಪತಿ ಕಲೀಂ ಪಾಷಾನನ್ನು ಬಂಧನ ಮಾಡಲಾಗಿದೆ. ಅವರ ವಿರುದ್ಧ ಸಾಕಷ್ಟು ಸಾಕ್ಷಿ ಕಲೆಹಾಕಿದ್ದೇವೆ. ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಎಸ್ಡಿಪಿಐ ನಡುವಿನ ಭಿನ್ನಾಭಿಪ್ರಾಯಗಳೂ ಘಟನೆಗೆ ಕಾರಣ. ಸ್ಥಳೀಯ ರಾಜಕಾರಣಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದರು.
ಒಟ್ಟು 206 ಜನ ಬಂಧನ!
ರಾಜಕೀಯ ಭಿನ್ನಾಭಿಪ್ರಾಯದ ಜೊತೆಗೆ ಕಾನೂನು ಹದಗೆಡಿಸುವವಲ್ಲಿ ಎಸ್ಡಿಪಿಐ ಪಾತ್ರ ಕೂಡ ಪ್ರಕರಣದಲ್ಲಿ ಸೇರಿದೆ. ತನಿಖೆ ಮುಂದುವರೆದಿದೆ. ನಿನ್ನೆ ರಾತ್ರಿಯೂ 60ಕ್ಕಿಂತ ಹೆಚ್ಚಿನ ಜನರನ್ನು ಬಂಧಿಸಿದ್ದೇವೆ. ಈವರೆಗೆ 206 ಜನರ ಬಂಧನವಾಗಿದೆ. ಕೆಲವರು ಬಳ್ಳಾರಿ ಜೈಲಿನಲ್ಲಿದ್ದಾರೆ. ಕಾರ್ಯಾಚರಣೆ ಮುಂದುವರೆದಿದ್ದು, ಸಮಾಜ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಜಮೀರ್ ನಡೆಗೆ ಕಿಡಿ!
ಗಲಭೆಯಲ್ಲಿ ಮೃತಪಟ್ಟವರಿಗೆ ಶಾಸಕ ಜಮೀರ್ ಅಹಮದ್ ಪರಿಹಾರ ನೀಡುತ್ತಿರುವುದು ಅವರ ವೈಯಕ್ತಿಕ ವಿಷಯ. ಆದರೆ ಜಮೀರ್ ನಿಲುವುಗಳು, ನಿರ್ಣಯಗಳು ಅವರು ಯಾರ ಪರ ಇದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಇದು ಕಾಂಗ್ರೆಸ್ನ ತುಷ್ಟೀಕರಣ ಹಾಗೂ ಓಲೈಸುವ ರಾಜಕಾರಣವಾಗಿದೆ ಎಂದು ಜಮೀರ್ ನಡೆಗೆ ಕಿಡಿಕಾರಿದರು.
ಸಿಎಂ ಸೂಚನೆ ಏನು?
ನ್ಯಾಯಸಮ್ಮತವಾದ ತನಿಖೆ ನಡೆಸಿ, ಗಲಭೆಗೆ ಕಾರಣರಾದವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಿ ಎಂದು ಸಿಎಂ ಸೂಚನೆ ಕೊಟ್ಟಿದ್ದಾರೆ. ಅದರಂತೆ ನಾವು ಮುಂದುವರೆಯುತ್ತಿದ್ದೇವೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ಇಲ್ಲಿ ಉತ್ತರಪ್ರದೇಶದ ಮಾದರಿ ಅಗತ್ಯವಿಲ್ಲ...
ಯಾರು ದೊಂಬಿ ಮಾಡಿದ್ದಾರೋ ಅವರಿಂದಲೇ ನಷ್ಟವನ್ನು ವಸೂಲಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶವೇ ಇದೆ. ಆ ಆದೇಶವನ್ನೇ ಕಾನೂನು ಎಂದು ತಿಳಿದುಕೊಂಡು ನಾವು ಅದರ ಪ್ರಕಾರ ಕ್ರಮ ಕೈಗೊಳ್ಳುತ್ತಿದ್ದೇವೆ. ಮತ್ತೆ ಸುಗ್ರೀವಾಜ್ಞೆಯ ಅಗತ್ಯವಿಲ್ಲ. ಇಲ್ಲಿ ಉತ್ತರಪ್ರದೇಶದ ಮಾದರಿ ಅಗತ್ಯವಿಲ್ಲ. ಗಲಭೆ ಮಾಡಿದವರಿಂದಲೇ ನಷ್ಟವನ್ನು ವಸೂಲಿ ಮಾಡುವುದಷ್ಟೇ ಮುಖ್ಯ. ಅದನ್ನು ನಾವು ಮಾಡುತ್ತೇವೆ ಎಂದರು.