ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಹಿರಂಗಪಡಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸಲು ಅಭ್ಯರ್ಥಿಗಳು ಬಾಕಿಯಿರುವ ಕ್ರಿಮಿನಲ್ ಕೇಸ್‌ಗಳ ವಿವರ ನೀಡಲು ಪ್ರತ್ಯೇಕ ನಮೂನೆಯನ್ನು ಒದಗಿಸಬೇಕು ಎಂದು ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಕ್ರಿಮಿನಲ್ ಪ್ರಕರಣಗಳ ಮಾಹಿತಿ ನೀಡುವಂತೆ ಆದೇಶಿಸಿದ್ದ ಏಕ ಸದಸ್ಯಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಹಾಕಿದೆ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಅವರ ವಿರುದ್ಧ ಯಾವುದಾದರೂ ಕ್ರಿಮಿನಲ್ ಪ್ರಕರಣ ಬಾಕಿ ಇದ್ದರೆ ಅದರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಆ ಮಾಹಿತಿಯನ್ನು ಟಿಕೆಟ್ ನೀಡುವ ರಾಜಕೀಯ ಪಕ್ಷಕ್ಕೂ ವಿವರ ಒದಗಿಸಬೇಕು. ಆಯಾ ಪಕ್ಷದ ವೆಬ್ಸೈಟ್ನಲ್ಲೂ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ತಿಳಿಸಬೇಕು. ಅಭ್ಯರ್ಥಿಗಳು ಪತ್ರಿಕೆಗಳಲ್ಲೂ ಪ್ರಕಟಿಸಬೇಕು ಎಂದು ನ್ಯಾಯಪೀಠ ಆಯೋಗಕ್ಕೆ ಸೂಚಿಸಿದೆ.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಕೇಸ್‌ಗಳ ವಿವರಗಳನ್ನು ರಾಜ್ಯ ಚುನಾವಣಾ ಆಯೋಗ ಮತ್ತು ಇತರೆ ಸಂಸ್ಥೆಗಳಿಗೆ ಒದಗಿಸಬೇಕು. ಆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಜಾರಿಗೊಳಿಸಬೇಕು ಹಾಗು ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ನಾಮಪತ್ರ ಸಲ್ಲಿಸುವಾಗ ಕ್ರಿಮಿನಲ್ ಪ್ರಕರಣಗಳ ಉಲ್ಲೇಖಕ್ಕೆ ಪ್ರತ್ಯೇಕ ನಮೂನೆಯನ್ನು ನೀಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: 15 ವರ್ಷ ಹಿಂದಿನ ಅಪಘಾತ ಪ್ರಕರಣ : ಬೈಕ್ ಸವಾರನ ತಪ್ಪು ಸಾಬೀತು, ಪರಿಹಾರ ₹85 ಸಾವಿರಕ್ಕೆ ಇಳಿಕೆ
ಸುಪ್ರೀಂ ಕೋರ್ಟ್ 2018ರಲ್ಲಿ ಪಬ್ಲಿಕ್ ಇಂಟ್ರೆಸ್ಟ್ ಫೌಂಡೇಷನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಅಭ್ಯರ್ಥಿಗಳ ಕ್ರಿಮಿನಲ್ ವಿವರ ಘೋಷಿಸುವ ಸಂಬಂಧದ ಹಲವು ನಿರ್ದೇಶನಗಳನ್ನು ಉಲ್ಲೇಖಿಸಿದೆ. ಜತೆಗೆ, ತೀರ್ಪಿನ ಬಗ್ಗೆ ವ್ಯಾಪಕ ಪ್ರಚಾರ ನೀಡುವ ಅಗತ್ಯವಿದೆ ಎಂದಿದೆ.
ಇದನ್ನೂ ಓದಿ: ಮದುವೆ ಸಂಬಂಧದಿಂದ ಆಧಾರ್ ಖಾಸಗಿತನ ಮೊಟಕು ಸಾಧ್ಯವಿಲ್ಲ : ಹೈಕೋರ್ಟ್
ಪ್ರಕರಣದ ಹಿನ್ನೆಲೆ: ಹೊಸನಗರ ತಾಲೂಕಿನ ಹರಿದ್ರಾವತಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೆ.ವಿ.ಅಶೋಕ್ ಎಂಬವರು ಆಯ್ಕೆಯಾಗಿದ್ದರು. ಆದರೆ ಇವರು ಕ್ರಿಮಿನಲ್ ಹಿನ್ನೆಲೆ ಬಹಿರಂಗಪಡಿಸದ ಕಾರಣಕ್ಕೆ ರಾಜ್ಯ ಚುನಾವಣಾ ಆಯೋಗ ಆಯ್ಕೆಯನ್ನು ರದ್ದುಗೊಳಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯಪೀಠ ಅಸಿಂಧು ಆದೇಶವನ್ನು ಊರ್ಜಿತಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಸರ್ಕಾರಿ ನೌಕರನ ಭ್ರಷ್ಟಾಚಾರ : ಮೂರನೇ ವ್ಯಕ್ತಿ ದೂರಿನನ್ವಯ ನಿವೃತ್ತಿ ಸೌಲಭ್ಯ ತಡೆಯುವಂತಿಲ್ಲ - ಹೈಕೋರ್ಟ್