ಬೆಂಗಳೂರು : ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೊಳಗಾಗಿದ್ದ ಬೀದಿಬದಿ ವ್ಯಾಪಾರಿಗಳಿಗೆ, ಕೇಂದ್ರ ಸರ್ಕಾರ ಘೋಷಿಸಿದ ಆತ್ಮನಿರ್ಭರ ಯೋಜನೆಯಡಿ ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ.
ಇದನ್ನೂ ಓದಿ...ಬೀದಿಬದಿ ವ್ಯಾಪಾರಿಗಳಿಗೆ ವರದಾನವಾದ ಆತ್ಮನಿರ್ಭರ ಯೋಜನೆ
ಗಣಿ ಜಿಲ್ಲೆಯಲ್ಲಿ ಆತ್ಮ ನಿರ್ಭರ ಭಾರತ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 16 ಸ್ಥಳೀಯ ಸಂಸ್ಥೆಗಳು ಈವರೆಗೂ 4 ಕೋಟಿ ರೂಪಾಯಿಗೂ ಅಧಿಕ ಸಾಲವನ್ನು ಬೀದಿಬದಿ ವ್ಯಾಪಾರಸ್ಥರಿಗೆ ವಿತರಿಸಿವೆ.
ಲೇವಾದೇವಿಗಾರರಿಂದ ಸಾಲಮಾಡಿ ವ್ಯಾಪಾರ ಆರಂಭಿಸುವ ಬಡ ಹಾಗೂ ನಿರ್ಗತಿಕ ಸಮುದಾಯದ ಬೀದಿಬದಿ ವ್ಯಾಪಾರಸ್ಥರಿಗೆ, ಬಡ್ಡಿ ರಹಿತ ಸಾಲ ನೀಡುವ ಮೂಲಕ ಜಿಲ್ಲೆಯ ನಾನಾ ಬ್ಯಾಂಕುಗಳು ನೆರವಾಗಿವೆ. ಅದರಲ್ಲಿ ಬಳ್ಳಾರಿ ಜಿಲ್ಲಾ ಮಾರ್ಗದರ್ಶಿ (ಲೀಡ್ ಬ್ಯಾಂಕ್) ಕಾರ್ಯಾಲಯ ಪ್ರಮುಖ ಪಾತ್ರವಹಿಸಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರತಿ ಬೀದಿ ವ್ಯಾಪಾರಿಗಳ ಬಳಿ ಹೋಗಿ, ಈ ಯೋಜನೆಯ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದಲ್ಲಿ ಈವರೆಗೂ 3,431 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಪ್ರತಿಯೊಬ್ಬರಿಗೂ 10 ಸಾವಿರ ಸಾಲ ನೀಡಲಾಗಿದೆ.
ಈ ಸಾಲ ಮರಳಿಸಿದ ಬಳಿಕ ನಂತರ ಹೆಚ್ಚಿನ ಸಾಲ ನೀಡಲಾಗುತ್ತದೆ. ಆತ್ಮನಿರ್ಭರ ಯೋಜನೆಯಡಿ ಬಡ್ಡಿ ರಹಿತ ಸಾಲ ಪಡೆದ ಫಲಾನುಭವಿಗಳು ತಮ್ಮ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಸರ್ಕಾರದ ಕೆಲ ಯೋಜನೆಗಳು ಜನರನ್ನು ತಲುಪಿವೆ ಎನ್ನುವುದಕ್ಕೆ ಇದೇ ಸಾಕ್ಷಿ.