ಬೆಂಗಳೂರು: ಫೆಬ್ರವರಿ 07 ರಿಂದ 09ರ ವರೆಗೆ ಬೀದರ್ ನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ರಾಜ್ಯ ಮಟ್ಟದ ಪಶುಮೇಳ ನಡೆಯಲಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಈ ಸಂಬಂಧ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಶುಮೇಳದಲ್ಲಿ ವಿವಿಧ ಪ್ರಮುಖ ತಳಿಗಳ ಪ್ರದರ್ಶನ ಮತ್ತು ಪಶುಪಾಲನಾ ಇಲಾಖೆಯ ಚಟುವಟಿಕೆಗಳ ಬಗ್ಗೆ ರೈತರಿಗೆ, ಜಾನುವಾರು ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ಪ್ರದರ್ಶನವನ್ನು ನೀಡುವುದರ ಮೂಲಕ ರೈತರಲ್ಲಿ ಹೆಚ್ಚಿನ ಅರಿವು ನೀಡಲಾಗುತ್ತದೆ. ಎಲ್ಲ ರೈತರಿಗೆ ಹೈನುಗಾರಿಕೆ, ಜಾನುವಾರು ಸಾಕಾಣಿಕೆ, ಕುರಿಸಾಗಣಿಕೆ, ಹಂದಿ ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಹಾಗೂ ಜಾನುವಾರು ಸಂಬಂಧಿತ ಮಳಿಗೆಗಳನ್ನು ತೆರೆಯಲಾಗುವುದು ಎಂದರು.
ಸಿಎಂ ಯಡಿಯೂರಪ್ಪ ಇದೇ ವೇಳೆ ಬೀದರ್ನಲ್ಲಿ ಬಹು ನಿರೀಕ್ಷಿತ ವಿಮಾನ ನಿಲ್ದಾಣ ಉದ್ಘಾಟನೆ ನಡೆಸಲಿದ್ದು, ಬೀದರ್ನಿಂದ ಬೆಂಗಳೂರಿಗೆ ವಿಮಾನ ಹಾರಾಟಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ರಾಜ್ಯ ಕಸಾಯಿಖಾನೆ ಮುಕ್ತ ಮಾಡಲಿದ್ದೇವೆ:
ರಾಜ್ಯವನ್ನು ಕಸಾಯಿಖಾನೆ ಮುಕ್ತ ಮಾಡುತ್ತೇವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ವಿವರಿಸಿದರು. ಆದರೆ, ಈ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.
ಪಶು ಮಂಡಳಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ, ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಇಲಾಖೆ ಆಯುಕ್ತರು ಇದೇ ವೇಳೆ ಸ್ಪಷ್ಟಪಡಿಸಿದರು.