ಬೆಂಗಳೂರು: ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲಿಗರು ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕೂಗಿಗೆ ಜೀವ ತುಂಬುತ್ತಿದ್ದಂತೆ ಮೂಲ ಕಾಂಗ್ರೆಸ್ ನಾಯಕರು ಇದನ್ನು ತಡೆಯಲು “ದಲಿತ ಸಿಎಂ" ಟ್ರಂಪ್ ಕಾರ್ಡ್ ಬಳಕೆಗೆ ಮುಂದಾಗಿದ್ದಾರೆ.
ಈ ನಿಟ್ಟಿನಲ್ಲಿ ಈಗಾಗಲೇ ಮೂಲ ಕಾಂಗ್ರೆಸ್ ನಾಯಕರು ರಾಜ್ಯ ಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಹಾಗೂ ಇತರೆ ನಾಯಕರ ಬೆಂಬಲದೊಂದಿಗೆ ದಲಿತ ಸಿಎಂ ಸೂತ್ರ ಹಿಡಿದು ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ನಿನ್ನೆಯಷ್ಟೇ ಪರಮೇಶ್ವರ್ ಜತೆ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ, ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸುದೀರ್ಘ ಸಮಾಲೋಚನೆ ನಡೆಸಿದ ನಂತರ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಸದ್ಯ ಸಿಎಂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಕಾಂಗ್ರೆಸ್ ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರು ಹರಸಾಹಸ ಪಡುತ್ತಿರುವ ಸಂದರ್ಭದಲ್ಲೇ ಇಂತಹ ಬೆಳವಣಿಗೆಗಳು ನಡೆಯುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಎಲ್ಲರೂ ಸಿಎಂ ಆಕಾಂಕ್ಷಿಗಳು: 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ತಾವೇ ಸಿಎಂ ಎಂದು ಹಲವರು ಹೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಬೆಂಬಲಿಗರು ಹೇಳಿ ಆಗಿದೆ. ಅವರಿಗೆ ಪಕ್ಷ ನೋಟಿಸ್ ನೀಡಬೇಕೆಂದು ನಿರ್ಧರಿಸುವ ಸಂದರ್ಭದಲ್ಲೇ ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಸುತ್ತೂರು ಮಠಕ್ಕೆ ಭೇಟಿಕೊಟ್ಟ ಬಳಿಕ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ತಾವು ಸಿಎಂ ಸ್ಥಾನ ಆಕಾಂಕ್ಷಿಗಳು ಎಂದು ಸೂಚ್ಯವಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಾನು ಕೂಡ ಸಿಎಂ ರೇಸ್ನಲ್ಲಿದ್ದೇನೆ : ಡಾ.ಜಿ.ಪರಮೇಶ್ವರ್ ಹೊಸ ಬಾಂಬ್
ಇದಲ್ಲದೇ ತಾವು ಸಿಎಂ ಅಭ್ಯರ್ಥಿ ಎಂಬ ಭರವಸೆ ಕೊಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಕಟ್ಟುವ ಕಾರ್ಯ ಮಾಡುವುದಾಗಿ ಹೇಳಿ ಬಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಲ್ಲಿಯೂ ತಾನು ಆಕಾಂಕ್ಷಿ ಎಂದು ಹೇಳಿಕೊಳ್ಳದಿದ್ದರೂ, ಅವರಿಗೆ ಹೈಕಮಾಂಡ್ನಿಂದ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಇದೆ. ಇದರ ಹೊರತಾಗಿ ತೆರೆಮರೆಯಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್ ಸೇರಿದಂತೆ ಹಲವು ನಾಯಕರು ಪ್ರಯತ್ನ ನಡೆಸಿದ್ದಾರೆ.
ಇದನ್ನೂ ಓದಿ: ಸಿಎಂ ರೇಸ್‌ನಲ್ಲಿ ಸಿದ್ದರಾಮಯ್ಯ ಒಬ್ಬರೇ ಇಲ್ಲ, ಪಕ್ಷದ ಹಲವು ಹಿರಿಯರಿದ್ದಾರೆ.. ಕೆ ಹೆಚ್ ಮುನಿಯಪ್ಪ
ಅವಕಾಶ ಸಿಕ್ಕರೆ ಯಾಕೆ ಸಿಎಂ ಆಗಬಾರದು ಎಂದು ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ ಕಾಯುತ್ತಿದ್ದಾರೆ. ಈ ನಡುವೆ ಪಕ್ಷವನ್ನು ಅಧಿಕಾರಕ್ಕೆ ತರುವವರನ್ನು ಸಿಎಂ ಮಾಡುವ ಭರವಸೆ ಕಾಂಗ್ರೆಸ್ ಹೈಕಮಾಂಡ್ ನೀಡಿದೆ. ಆದರೆ ಏಕವ್ಯಕ್ತಿ ಪ್ರಯತ್ನದಿಂದ ಅದು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಸಾಂಗಿಕ ಪ್ರಯತ್ನದಿಂದ ಗೆದ್ದರೆ ಸಿಎಂ ಸ್ಥಾನಕ್ಕೆ ಯಾರು ಅವಕಾಶ ಗಿಟ್ಟಿಸಿಕೊಂಡು ಬಿಡುತ್ತಾರೋ ಅನ್ನುವ ಆತಂಕದಲ್ಲಿ ಕೆಲ ನಾಯಕರು ನೇರವಾಗಿ, ಮತ್ತೆ ಕೆಲವರು ತಮ್ಮ ಬೆಂಬಲಿಗರ ಮೂಲಕ ಇವರೇ ಮುಂದಿನ ಸಿಎಂ ಎಂದು ಹೇಳಿಕೆ ಕೊಡಿಸುತ್ತಿದ್ದಾರೆ.
ದಲಿತ ಸಿಎಂ ಅಲೆ: ಬಹು ಹಿಂದಿನಿಂದಲೂ ದಲಿತ ಸಿಎಂ ಕೂಗು ಕಾಂಗ್ರೆಸ್ ಪಕ್ಷದಲ್ಲಿ ಕೇಳುತ್ತಲೇ ಇದೆ. ಆದರೆ ಇದೀಗ ಇದನ್ನೇ ಮುಂದಿಟ್ಟು ಮುಂದಿನ ಎರಡು ವರ್ಷ ಕಾಲ ಕಳೆದು, ಸಿದ್ದರಾಮಯ್ಯ ಬೆಂಬಲಿಗರ ಕೂಗನ್ನು ಹತ್ತಿಕ್ಕಲು ಕಾಂಗ್ರೆಸ್ ಪಕ್ಷದ ಮೂಲ ನಾಯಕರು ಮುಂದಾಗಿದ್ದಾರೆ. ಯಾರೇ ಆದರೂ ಸರಿ ಮೂಲ ಕಾಂಗ್ರೆಸ್ ನಾಯಕರಿಗೆ ಅವಕಾಶ ಸಿಗಬೇಕು ಎನ್ನುವುದು ಹೆಚ್ಚಿನವರ ಕೂಗಾಗಿದೆ.
ಸದ್ಯ ಈ ಕೂಗಿಗೆ ಡಿ.ಕೆ.ಶಿವಕುಮಾರ್ ಸಹ ಬೆಂಬಲಿಸಿದ್ದಾರೆ. ಮುಂದಿನ ಎರಡು ವರ್ಷ ಸಿಎಂ ಆಕಾಂಕ್ಷಿಗಳ ವಿಚಾರದಲ್ಲಿ ಸ್ಪರ್ಧೆ ಇರಲಿ, ಯಾವುದೇ ಸ್ಪಷ್ಟತೆ ಇರದ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ನಾಯಕರು ಮುಂದಾಗಲಿ ಎನ್ನುವ ಉದ್ದೇಶವೂ ಈ ಕೂಗಿನ ಹಿಂದೆ ಇದೆ ಎನ್ನಲಾಗುತ್ತಿದೆ. ಸದ್ಯ ಸಿದ್ದರಾಮಯ್ಯ ಸಹ ಇನ್ನೊಂದು ವಾರದಲ್ಲಿ ದಿಲ್ಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಅದಕ್ಕೂ ಮುನ್ನವೇ ಪರಮೇಶ್ವರ್ ಸಹ ದಿಲ್ಲಿ ನಾಯಕರನ್ನು ಭೇಟಿಯಾಗಲು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.