ಬೆಂಗಳೂರು: ಖ್ಯಾತ ವೈದ್ಯ ಡಾ. ಬಿ.ಎಂ ಹೆಗ್ಡೆ ಮತ್ತು ವಿಜ್ಞಾನ ಲೇಖಕ ಟಿ.ಆರ್ ಅನಂತರಾಮು ಅವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 2021ನೇ ಸಾಲಿನ ಚಿನ್ನದ ಪದಕ ಸಹಿತ ಸಿಎನ್ಆರ್ ರಾವ್ ಜೀವಮಾನ ಸಾಧನೆ ಪುರಸ್ಕಾರ ಮತ್ತು ನಿಟ್ಟೆ ವಿ.ವಿ.ಯ ಡಾ. ಇದ್ಯಾಕರುಣಾ ಸಾಗರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ. ಎನ್ ಅಶ್ವತ್ಥನಾರಾಯಣ ಪ್ರದಾನ ಮಾಡಿದರು.
ಜಿಕೆವಿಕೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್, ಉದ್ಯಮಿ ಕಿರಣ್ ಮಜುಂದಾರ್ ಷಾ, ಲೇಖಕಿ ಸುಧಾ ಮೂರ್ತಿ, ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ಕುಮಾರ್, ಗುಲ್ಬರ್ಗ ವಿವಿ ಕುಲಪತಿ ದಯಾನಂದ ಅಗಸರ್, ಡಿಆರ್ಡಿಒ ವಿಜ್ಞಾನಿ ಟೆಸ್ಸೀ ಥಾಮಸ್ ಸೇರಿದಂತೆ 40ಕ್ಕೂ ಹೆಚ್ಚು ವಿಜ್ಞಾನ ಸಾಧಕರಿಗೆ ಅಕಾಡೆಮಿಯ ಫೆಲೋಶಿಪ್ ಕೂಡ ಪ್ರದಾನ ಮಾಡಲಾಯಿತು.
ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ, ವಿಜ್ಞಾನವು ನಮ್ಮಲ್ಲಿ ಕೇವಲ ಮೇಲ್ತುದಿಯಲ್ಲಿರುವವರಿಗೆ ಮಾತ್ರ ಸಿಕ್ಕುತ್ತಿದೆ. ಮಹತ್ವದ ಸಂಶೋಧನೆಗಳು ಸಮಾಜದ ತಳ ಸ್ತರಕ್ಕೆ ತಲುಪದೇ ಇದ್ದರೆ ಪ್ರಯೋಜನವಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇನ್ನೂ ಮಾದರಿಗಳ ಬಗ್ಗೆಯೇ ಮಾತನಾಡುತ್ತಿರುವುದು ಸರಿಯಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಎಲ್ಲರಿಗೂ ಬಾಗಿಲು ತೆರೆಯಬೇಕಾಗಿದೆ ಎಂದರು.
ಜನಪರ ವಿಜ್ಞಾನ ಸಂಸ್ಕೃತಿಯನ್ನು ರೂಢಿಸಲು ಅಕಾಡೆಮಿಯು ನಾಯಕತ್ವ ವಹಿಸಿಕೊಳ್ಳಲು ಮುಂದಾಗಬೇಕು. ಸದ್ಯದಲ್ಲೇ ಮಂಡನೆಯಾಗಲಿರುವ ಬಜೆಟ್ನಲ್ಲಿ ಮುಂಚೂಣಿ ತಂತ್ರಜ್ಞಾನಾಧಾರಿತ ಕಾರ್ಯಕ್ರಮಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮುನ್ನೆಲೆಗೆ ತರುವ ಹಲವು ಕಾರ್ಯಕ್ರಮಗಳನ್ನು ಘೋಷಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಡಿ.ವಿ ಸದಾನಂದಗೌಡ, ಶಾಸಕ ಎಸ್.ಆರ್ ವಿಶ್ವನಾಥ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ನಿರ್ದೇಶಕ ಬಸವರಾಜು, ಅಕಾಡೆಮಿ ಅಧ್ಯಕ್ಷ ಎಸ್. ಅಯ್ಯಪ್ಪನ್ ಮುಂತಾದವರಿದ್ದರು. ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರ ಡಾ. ವಿಜಯರಾಘವನ್ ಮತ್ತು ಸುಧಾ ಮೂರ್ತಿ ವರ್ಚುಯಲ್ ಆಗಿ ರೂಪದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಓದಿ: ಬಜರಂಗದಳ ಕಾರ್ಯಕರ್ತನ ಮೃತದೇಹ ಮೆರವಣಿಗೆಗೆ ಅನುಮತಿ ನೀಡಿರಲಿಲ್ಲ: ಡಿಸಿ ಸ್ಪಷ್ಟನೆ..