ಬೆಂಗಳೂರು: ಮಹಾನಗರದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮತ್ತು 5 ವರ್ಷಗಳಿಂದೀಚೆಗೆ ನಿವೃತ್ತರಾಗಿರುವ ಸುಮಾರು 5 ಸಾವಿರ ಮಂದಿ ಪೊಲೀಸ್ ಕಾನ್ಸ್ಟೇಬಲ್ಗಳು, ಹೆಡ್ ಕಾನ್ಸ್ಟೇಬಲ್ಗಳು ಮತ್ತು ಸಬ್ ಇನ್ಸ್ಪೆಕ್ಟರ್ಗಳು ಹಾಗೂ ಬೆಂಗಳೂರು ಮಹಾನಗರದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಹಾಗೂ 5 ವರ್ಷಗಳಿಂದೀಚೆ ನಿವೃತ್ತರಾಗಿರುವ 3 ಸಾವಿರ ಮಂದಿ ಶಿಕ್ಷಕರಿಗೆ ರಾಜ್ಯ ಸರ್ಕಾರದ ವಸತಿ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ “ಸನ್ ಸಿಟಿ 4ನೇ ಹಂತ”ದ ವಸತಿಗೃಹಗಳಲ್ಲಿ ಅತಿ ಕಡಿಮೆ ಬೆಲೆಗೆ ಹಂಚಿಕೆ ಮಾಡಬೇಕೆಂದು ವಸತಿ ಸಚಿವ ವಿ. ಸೋಮಣ್ಣ ಅವರನ್ನು ಆಡಳಿತ ಪಕ್ಷದ ಮಾಜಿ ನಾಯಕ, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ಆರ್ ರಮೇಶ್ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಸದಾ ನಮ್ಮ ರಕ್ಷಣೆಗಾಗಿ ಶ್ರಮಿಸುವ ರಕ್ಷಕರು ಹಾಗೂ ಜೀವನವನ್ನು ರೂಪಿಸಿ ದೇಶದ ಸತ್ಪ್ರಜೆಗಳನ್ನಾಗಿ ಮಾಡುವ ಶಿಕ್ಷಕರ ಋಣ ಸಂದಾಯಕ್ಕಾಗಿಯಾದರೂ ಕುಟುಂಬಗಳ ಭದ್ರತೆ ದೃಷ್ಠಿಯಿಂದ ವಸತಿಗೃಹಗಳನ್ನು ಮಂಜೂರು ಮಾಡುವ ಅವಶ್ಯಕತೆ ಅತಿ ಹೆಚ್ಚಾಗಿ ಇದೆ ಎಂದು ಸಚಿವರಿಗೆ ರಮೇಶ್ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಸ್ಥಳದಲ್ಲೇ ಪ್ರತಿಕ್ರಿಯಿಸಿದ ವಿ. ಸೋಮಣ್ಣ ಮನವಿ ಪತ್ರವನ್ನು ಸ್ವೀಕರಿಸಿ ಪತ್ರದಲ್ಲಿ ತಿಳಿಸಿರುವಂತೆ ನಿವೃತ್ತ ಪೊಲೀಸ್ ಸಿಬ್ಬಂದಿಗೆ ಮತ್ತು ಶಿಕ್ಷಕರಿಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ವಸತಿಗೃಹಗಳನ್ನು ಮಂಜೂರು ಮಾಡುವ ಬಗ್ಗೆ ಶೀಘ್ರದಲ್ಲೇ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.