ಬೆಂಗಳೂರು: ಬೀದಿ ಬದಿ ತಳ್ಳುವ ಗಾಡಿ, ಹೋಟೆಲ್ ವ್ಯಾಪಾರಕ್ಕೆ ನಿರ್ಬಂಧ ಹೇರುವಂತೆ ಹೋಟೆಲ್ ಮಾಲಿಕರ ಸಂಘದವರು ಪಾಲಿಕೆಗೆ ಮನವಿ ಮಾಡಿರುವುದು ಬೆಳಕಿಗೆ ಬಂದಿದೆ.
ಬೀದಿ ಬದಿ ತಳ್ಳುವ ಗಾಡಿಗಳು, ಸಣ್ಣ ಅಂಗಡಿಗಳು ನಿಯಮ ಪಾಲನೆ ಮಾಡುತ್ತಿಲ್ಲ. ಸ್ವಚ್ಛತೆಯ ಕಡೆ ಗಮನ ಹರಿಸದ ಹಿನ್ನೆಲೆ ಜನ ಸಾಮಾನ್ಯರ ಆರೋಗ್ಯಕ್ಕೆ ಸಮಸ್ಯೆಯಾಗುತ್ತಿದೆ. ಇಂತಹ ವ್ಯಾಪಾರಸ್ಥರು ಸರಕಾರದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಅಲ್ಲದೇ ಟ್ರೇಡ್ ಲೈಸೆನ್ಸ್ ಹೊಂದಿಲ್ಲ. ಜೊತೆಗೆ ಸರಕಾರಕ್ಕೆ ತೆರಿಗೆಯನ್ನು ಪಾವತಿಸುತ್ತಿಲ್ಲ. ತಕ್ಷಣ ಎಲ್ಲ ಬೀದಿ ಬದಿಯ ಹೋಟೆಲ್‌ಗಳನ್ನು ಬಂದ್ ಮಾಡಿಸಿ ಎಂದು ಪಾಲಿಕೆಯ ಆಯುಕ್ತರಿಗೆ ಹೋಟೆಲ್ ಮಾಲಿಕರ ಸಂಘವು ಪತ್ರ ಬರೆದಿದೆ.
ನಮಗೆ ನಿತ್ಯ ಸಂಪಾದನೆಯು ಬೀದಿ ಬದಿ ವ್ಯಾಪಾರದ ಮೇಲೆ ಅವಲಂಬಿತವಾಗಿದೆ. ಈ ರೀತಿ ನಿರ್ಬಂಧ ಹೇರಿದರೆ ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದವರು ಆಕ್ರೋಶ ಹೊರಹಾಕಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸದ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ "ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಹಾಗೂ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರ ನಿಷೇಧಿಸಲು ತೀರ್ಮಾನಿಸಲಾಗಿದೆ.
ಎಲ್ಲ ಬೀದಿ ಬದಿ ವ್ಯಾಪಾರಿಗಳ ನಿಷೇಧಕ್ಕೆ ಮನವಿ ಸಲ್ಲಿಕೆಯಾಗಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು, ಸದ್ಯ ಈ ಕುರಿತು ಯಾವುದೇ ಆದೇಶವನ್ನು ಪಾಲಿಕೆಯಿಂದ ನೀಡಲಾಗಿಲ್ಲ ಎಂದು ಹೇಳಿದ್ದಾರೆ.
ವ್ಯಾಪಾರಿ ವಲಯಗಳ ಸ್ಥಾಪನೆ: ಬೀದಿ ಬದಿ ವ್ಯಾಪಾರಿಗಳು ವಾರ್ಡ್ ರಸ್ತೆಗಳಲ್ಲಿನ ಪಾದಚಾರಿ ಮಾರ್ಗದಲ್ಲಿ ಜನರ ಓಡಾಟಕ್ಕೆ ತಡೆಯುಂಟಾಗದಂತೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು. ವಾರ್ಡ್ ಮಟ್ಟದಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ ವ್ಯಾಪಾರಿ ವಲಯ ಆರಂಭಿಸಲು ನಿರ್ಧರಿಸಲಾಗಿದೆ. ಅದರಲ್ಲಿ ವ್ಯಾಪಾರಿಗಳಿಗೆ ತಳ್ಳುವಗಾಡಿ ಅಥವಾ ಪೆಟ್ಟಿಗೆ ಅಂಗಡಿ ಸ್ಥಾಪಿಸುವುದು ಸೇರಿದಂತೆ ವ್ಯಾಪಾರಕ್ಕೆ ಅನುಕೂಲವಾಗುವಂತಹ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ
ಇದನ್ನೂ ಓದಿ: ಕಾಫಿ ಪೌಡರ್ನಲ್ಲಿ ಕಲಬೆರಕೆ ಮಾಡಿದ್ದ ಅಪರಾಧಿಗೆ ಶಿಕ್ಷೆ: ಕೆಳ ಕೋರ್ಟ್ ಆದೇಶ ಎತ್ತಿಹಿಡಿದ ಹೈಕೋರ್ಟ್