ಬೆಂಗಳೂರು: ಅಮೃತ್ ಮಹಲ್ ತಳಿಗಳನ್ನು ಅಭಿವೃದ್ಧಿಪಡಿಸಬೇಕು ಹಾಗೂ ಅಮೃತ್ ಮಹಲ್ ಕಾವಲ್ ಒತ್ತುವರಿ ತೆರವುಗೊಳಿಸಿ ಅವುಗಳನ್ನೆಲ್ಲಾ ಗೋಶಾಲೆಗಳನ್ನಾಗಿ ಮಾಡಬೇಕು ಎಂದು ಜೆಡಿಎಸ್ ಸದಸ್ಯ ಭೋಜೇಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ವಿತ್ತೀಯ ಕಲಾಪದಲ್ಲಿ ಬಜೆಟ್ ಮೇಲಿನ ಮುಂದುವರೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಅದರಂತೆ ರಾಜ್ಯದಲ್ಲಿ ಜಾನುವಾರು ಹತ್ಯೆ ಮಾಡುವಂತಿಲ್ಲ. ಸಾಕಲು ಕಷ್ಟವಾದರೆ ಗೋಶಾಲೆಗಳಿಗೆ ತಂದುಕೊಡಬಹುದು ಎಂದು ಸರ್ಕಾರ ಹೇಳಿದೆ. ಆದರೆ ಜಿಲ್ಲೆಯಲ್ಲಿ ಎಲ್ಲೋ ಒಂದು ಗೋಶಾಲೆ ತೆರೆದರೆ ಅಲ್ಲಿಗೆ ಎಲ್ಲರೂ ಗೋವುಗಳನ್ನು ತಂದುಕೊಡಲು ಹೇಗೆ ಸಾಧ್ಯ? ಸಾಗಾಣಿಕೆ ವೆಚ್ಚ ಯಾರು ಭರಿಸುತ್ತಾರೆ? ಎಂದು ಪ್ರಶ್ನಿಸಿದರು.
ಗಿರ್ ತಳಿಯ ಗೋವು ಸಾಕಾಣಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಆದರೆ ಗಿರ್ ತಳಿಯಲ್ಲಿ ಗಂಡು ಕರು ಹುಟ್ಟಿದರೆ ಏನು ಮಾಡಬೇಕು, ಅವು ವ್ಯವಸಾಯಕ್ಕೆ ಬರುವುದಿಲ್ಲ, ಅವುಗಳನ್ನು ಎಲ್ಲೋ ಇರುವ ಗೋಶಾಲೆಗೆ ತಂದು ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಮೈಸೂರು ಮಹಾರಾಜರ ಕಾಲದಲ್ಲಿ ಅಮೃತ್ ಮಹಲ್ ಕಾವಲ್ ತಂದರು, ಅದು ಈಗ ಒತ್ತುವರಿಯಾಗಿದೆ. ಆ ಜಾಗ ಖಾಲಿ ಮಾಡಿಸಿ ಗೋಶಾಲೆ ಮಾಡಬೇಕಿದೆ. ರಾಜ್ಯದಲ್ಲಿ ಎರಡು ಲಕ್ಷ ಎಕರೆ ಅಮೃತ್ ಮಹಲ್ ಕಾವಲ್ ಜಾಗ ಇದೆ, ಅಮೃತ್ ಮಹಲ್ ತಳಿಯೂ ಇದೆ. ಅಲ್ಲೇ ಗೋಶಾಲೆ ಮಾಡಿದರೆ ರಾಸುಗಳಿಗೆ ಮೇವೂ ಸಿಗಲಿದೆ, ಜಾಗವೂ ಸಿಗಲಿದೆ ಎಂದರು.
ಅಮೃತ್ ಮಹಲ್ ತಳಿ ಅಭಿವೃದ್ಧಿಪಡಿಸಿದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಆ ತಳಿಯ ಹೋರಿಕರಕ್ಕೆ ಒಂದರಿಂದ ಎರಡು ಲಕ್ಷ ರೂ. ಸಿಗಲಿದೆ. ಗಿರ್ ನಲ್ಲಿ ವ್ಯವಸಾಯ ಮಾಡಲು ಸಾಧ್ಯವಿಲ್ಲ. ಆದರೆ ಅಮೃತ್ ಮಹಲ್ ತಳಿ ವ್ಯವಸಾಯ ಮಾಡಲು ಯೋಗ್ಯ ಹಾಗೂ ಆರ್ಥಿಕವಾಗಿಯೂ ಲಾಭದಾಯಕವಾಗಲಿದೆ ಎಂದರು.
ಅನುಗ್ರಹ ಯೋಜನೆ ಒಳ್ಳೆಯ ಕೊಡುಗೆಯಾಗಿದೆ. ಸದ್ಯ ಕುರಿಗಳ ಅಕಾಲಿಕ ಮರಣಕ್ಕೆ ಪರಿಹಾರ ನೀಡುತ್ತಿದ್ದು, ಪರಿಹಾರದ ಮೊತ್ತವನ್ನು ಒಂದು ಕುರಿಗೆ 10 ಸಾವಿರ ರೂ.ನಂತೆ ನಿಗದಿಪಡಿಸಬೇಕು. ಇದರಿಂದ ಕುರಿ ಸಾಕಾಣಿಕೆ ಮಾಡುವವರಿಗೆ ಸರ್ಕಾರ ನಮ್ಮ ಜೊತೆ ಇದೆ ಎನ್ನುವ ಧೈರ್ಯ ಬರಲಿದೆ ಎಂದರು.
ಇದನ್ನೂ ಓದಿ: ಮಲೆನಾಡು ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಇದೆ, ಹೆಚ್ಚಿನ ಟವರ್ ಹಾಕಿ: ಹರತಾಳು ಹಾಲಪ್ಪ ಆಗ್ರಹ
ಶಿಕ್ಷಣ-ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ಕೊಡಬೇಕು. ಪ್ರತಿ ವರ್ಷ 50 ಪಬ್ಲಿಕ್ ಶಾಲೆ ಆರಂಭಿಸಬೇಕು, ಪಬ್ಲಿಕ್ ಶಾಲೆಗಳಿಗೆ ಬೇಡಿಕೆ ಜಾಸ್ತಿ ಇದೆ. ಹಾಗಾಗಿ 5 ಕೋಟಿ ರೂ. ಹಣವನ್ನು ಪ್ರತಿ ಶಾಲೆಗೆ ಕೊಟ್ಟು ಪಬ್ಲಿಕ್ ಶಾಲೆ ಆರಂಭಿಸಬೇಕು ಎಂದರು.
ಸರ್ಕಾರಿ ಶಾಲೆಯಲ್ಲಿ ಅಟೆಂಡರ್ ಇಲ್ಲ, ಕಸ ಹೊಡೆಯುವವರು ಇಲ್ಲ, ಹೆಡ್ ಮಾಸ್ಟರ್ ಕಸ ಗುಡಿಸಬೇಕು. ಇಲ್ಲವೇ ಮಕ್ಕಳು ಗುಡಿಸಬೇಕೆನ್ನುವ ಸ್ಥಿತಿ ಇದೆ. ಸರ್ಕಾರಿ ಶಾಲೆಗೆ ಬಡ ಮಕ್ಕಳೇ ಹೋಗುತ್ತಾರೆ, ಉಳ್ಳವರೆಲ್ಲಾ ಖಾಸಗಿ ಶಾಲೆಗೆ ಹೋಗುತ್ತಾರೆ. ಸಹಜವಾಗಿ ಫಲಿತಾಂಶ ಶೇ. 100ರಷ್ಟು ಬರುತ್ತಿದೆ. ಆದರೆ ಸರ್ಕಾರಿ ಶಾಲೆಗೆ ಎಲ್ಲಾ ಕಡೆ ಪ್ರವೇಶ ಆಗಿ ಉಳಿದ ಮಕ್ಕಳು, ಬಡ, ಹಿಂದುಳಿದ ವರ್ಗದ ಮಕ್ಕಳು ಬರುತ್ತಾರೆ. ಅವರಿಂದ ಒಳ್ಳೆಯ ಫಲಿತಾಂಶ ತರಬೇಕು ಎನ್ನುತ್ತಾರೆ. ಆದರೆ ಅದು ಹೇಗೆ ಸಾಧ್ಯ? ಅನೇಕ ಶಿಕ್ಷಕರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲಿನ ಒತ್ತಡ ಕಡಿಮೆ ಮಾಡಬೇಕು ಅದಕ್ಕೆ ಅಗತ್ಯ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಿಗೂ ಕಲ್ಪಿಸಬೇಕು, ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
ಬೇರೆಯವರಿಗೆ ಹೇಳುವ ಮೊದಲು ನಾವು ಮಾಡೆಲ್ ಆಗಬೇಕು. ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಆದರೆ ಮೊದಲು ಸರ್ಕಾರಿ ಶಾಲೆಯಲ್ಲಿ ಅದೆಲ್ಲಾ ಆಗಬೇಕುವ ನಂತರ ಉಳಿದ ಶಾಲೆಗಳ ಕಡೆ ಹೋಗಬೇಕು. ನಾವೇ ಅವರಿಗೆಲ್ಲಾ ಮಾಡೆಲ್ ಆಗಬೇಕು ಎಂದರು.