ಬೆಂಗಳೂರು: ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ವಿವಿಧ ಗ್ಯಾರಂಟಿಗಳು ಷರತ್ತುರಹಿತವಾಗಿ ಅನುಷ್ಠಾನ ಆಗಲಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗ್ರಹಿಸಿದರು.
ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಕಾರಾತ್ಮಕವಾಗಿ ವಿಪಕ್ಷ ಸ್ಥಾನ ನಿರ್ವಹಿಸಲಿದೆ. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಕಾರ್ಡ್ ಪ್ರತಿ ವ್ಯಕ್ತಿಗೂ ಸಿಗೋ ಬಗ್ಗೆ ಘೋಷಣೆ ಮಾಡಿದೆ. ಯಾವುದೇ ಷರತ್ತು ಇಲ್ಲದೇ ನೀಡೋದಾಗಿ ಹೇಳಿದೆ. ಮುಂದೆ ಏನು ಮಾಡಲಿದ್ದಾರೆ ಅಂತ ನೋಡೋಣ. ಬಿಜೆಪಿ ರಾಜ್ಯದಲ್ಲಿ ಸಕಾರಾತ್ಮಕ ಹಾಗೂ ಸಮರ್ಥ ವಿಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ವಿಪಕ್ಷ ನಾಯಕನ ಆಯ್ಕೆಯನ್ನು ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್ ಆಯ್ಕೆ ಮಾಡಲಿದೆ. ಶೀಘ್ರದಲ್ಲಿ ಆಯ್ಕೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಪಕ್ಷದ ಮತ ಕಾಂಗ್ರೆಸ್ಗೆ ಲಭಿಸಿದೆ: ಭಾನುವಾರ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಪ್ರಭಾರಿಗಳ ಸಭೆ ನಡೆಸಿ ಚುನಾವಣೆ ಸಂಬಂಧ ಮಾಹಿತಿ ಪಡೆಯಲಾಗಿದೆ. ಎಲ್ಲ ಕಾರ್ಯಕರ್ತರು ಚುನಾವಣೆಯಲ್ಲಿ ಪಕ್ಷಕ್ಕಾಗಿವಿಶೇಷ ಶ್ರಮಪಟ್ಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಶೇಕಡಾವಾರು ಮತ ಗಳಿಕೆ ಕಡಿಮೆ ಆಗಿಲ್ಲ.
ಜೆಡಿಎಸ್ ಪಕ್ಷದ ಸ್ವಲ್ಪ ಮತ ಪ್ರಮಾಣವು ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಲಭಿಸಿವೆ. ಪ್ರಸ್ತುತ ಬಿಜೆಪಿಗೆ 36% ಮತಗಳು ಬಂದಿವೆ. ಕಳೆದ ಬಾರಿಯೂ ಅಷ್ಟೇ ಶೇಕಡಾವಾರು ಮತಗಳು ಬಂದಿದ್ದವು ಎಂದು ಮಾಹಿತಿ ನೀಡಿದರು.
ನಾವು ಇನ್ನಷ್ಟು ಹೆಚ್ಚು ಸೀಟು ನಿರೀಕ್ಷಿಸಿದ್ದೆವು. ಕೆಲವು ವಿಧಾನಸಭೆ ಕ್ಷೇತ್ರಗಳಲ್ಲಿ ಮತ ಗಳಿಕೆ ಹೆಚ್ಚಾಗಿದೆ. ಕೆಲವೆಡೆ ಕಡಿಮೆ ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದೆ. ಬಡವರು, ರೈತರು, ಮಹಿಳೆಯರು, ಎಸ್‍ಸಿ, ಎಸ್‍ಟಿ ಸಮುದಾಯಕ್ಕಾಗಿ ಸರ್ಕಾರ ಶ್ರಮಿಸಿದೆ. 9 ವರ್ಷಗಳಲ್ಲಿ ಮೋದಿಜಿ ಅವರ ಸರ್ಕಾರ ಮಾಡಿದ ಸಾಧನೆಗಳನ್ನು ಕರ್ನಾಟಕದ ಜನತೆ ಮುಂದೆ ಇಡುತ್ತೇವೆ ಎಂದು ವಿವರಿಸಿದರು.
ಸೋಲಿನ ಆತ್ಮಾವಲೋಕನ ಸಭೆ: ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಹಿನ್ನೆಲೆ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಆತ್ಮಾವಲೋಕನ ಸಭೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೋಲಿನ ಪರಾಮರ್ಶೆ ನಡೆಸಲಾಯಿತು. ಸೋಲಿಗೆ ಕಾರಣವೇನು, ಎಡವಿದ್ದೆಲ್ಲಿ, ಜನರಿಗೆ ಬಿಜೆಪಿ ಸರ್ಕಾರದ ಯೋಜನೆಗಳು ತಲುಪದಿರಲು ಕಾರಣ ಏನು ಎಂಬುದರ ಬಗ್ಗೆ ಸವಿವರವಾಗಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಘಟಕಗಳ ಅಧ್ಯಕ್ಷರು, ವಿಭಾಗ ಉಸ್ತುವಾರಿಗಳು, ಸಹ ಉಸ್ತುವಾರಿಗಳು, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಸಹ ಸಂಘಟನಾ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂ ಬೊಮ್ಮಾಯಿ, ಸಿ.ಟಿ. ರವಿ, ಬಿ.ಎಲ್. ಸಂತೋಷ್, ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ : ಸಂಚಾರ ದಟ್ಟಣೆ: ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂಪಡೆಯುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ