ಬೆಂಗಳೂರು: ಕೆಲ ಮದರಸಾಗಳಲ್ಲಿ ಸಣ್ಣ ಮಕ್ಕಳಿಗೆ ಭಯೋತ್ಪಾದನೆ ಬಗ್ಗೆ ಪಾಠ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
ನಗರದ ವಿಕಾಸಸೌಧದಲ್ಲಿ ಮಾತನಾಡಿದ ಅವರು, ನಾವು ಮುಸ್ಲಿಮರನ್ನು ಗೌರವಿಸುತ್ತೇವೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಕೆಲ ಮಸೀದಿಗಳಲ್ಲಿ ಫತ್ವಾ ಹೊರಡಿಸಲಾಗಿದೆ. ಈ ದೇಶದಲ್ಲಿ ಹುಟ್ಟಿದವರೇ ಆಗಿದ್ದರೆ ಮುಸ್ಲಿಮರು ಪೌರತ್ವ ಕಾಯ್ದೆ ವಿರೋಧಿಸುತ್ತಿರಲಿಲ್ಲ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಮರನ್ನು ದೇಶದಿಂದ ಹೊರಗೆ ಕಳುಹಿಸುವ ಕಾಯ್ದೆ ಅಲ್ಲ. ಒಂದೇ ಒಂದು ತಪ್ಪು ಅಂಶವೂ ಕೂಡಾ ಈ ಕಾಯ್ದೆಯಲ್ಲಿ ಇಲ್ಲ. ಕೇವಲ ವೋಟ್ಬ್ಯಾಂಕ್ಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಎಂದು ರೇಣುಕಾಚಾರ್ಯ ಆರೋಪಿಸಿದರು.
ಮಾಜಿ ಸಿಎಂ ಹೆಚ್ಡಿಕೆ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಯಡಿಯೂರಪ್ಪನವರು ಸಿಎಂ ಆಗಿದ್ದಾಗಲೇ ಹಜ್ ಭವನ ಕಟ್ಟಿಸಿದ್ದರು. ಶಾದಿಮಹಲ್ಗಳಿಗೆ ಹಣ ಕೊಟ್ಟಿದ್ದರು. ಆದರೆ, ಕುಮಾರಸ್ವಾಮಿ ಅವರೇ ನೀವು ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದರು. ಮಂಗಳೂರು ವಿಮಾನ ನಿಲ್ದಾಣದ ಬಳಿ ಬಾಂಬ್ ಇಟ್ಟ ವ್ಯಕ್ತಿ ಸಿಕ್ಕಿದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಪೊಲೀಸರು ಈ ಬಗ್ಗೆ ತನಿಖೆ ಮಾಡ್ತಿದ್ದಾರೆ. ನಂತರ ಸತ್ಯ ಗೊತ್ತಾಗಲಿದೆ ಎಂದರು.