ಬೆಂಗಳೂರು: ಸಿಎಂ ಯಡಿಯೂರಪ್ಪನವರು ಬಾಲ್ಯದಲ್ಲಿ ನಿಂಬೆಹಣ್ಣು ಮಾರುತ್ತಿದ್ದರಂತೆ ಎಂಬ ಜಿ ಟಿ ದೇವೇಗೌಡರ ಮಾತಿಗೆ, ಬಹುಶಃ ಅದೇ ನಿಂಬೆಹಣ್ಣನ್ನು ಯಡಿಯೂರಪ್ಪನವರು ಹೆಚ್ ಡಿ ರೇವಣ್ಣನವರಿಗೆ ಕೊಟ್ಟಿರಬಹುದು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾಲೆಳೆದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಜಿ ಟಿ ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಟೀ ಮಾರಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಾಲ್ಯದಲ್ಲಿ ನಿಂಬೆಹಣ್ಣು ಮಾರಿ, ಮಾಜಿ ಸಿಎಂ ಸಿದ್ದರಾಮಯ್ಯನವರು ಎಮ್ಮೆ ಮೇಯಿಸಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ರೈತ ಕುಟುಂಬದಿಂದ ಬಂದು ಹಲವು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಆದರೂ ಭ್ರಷ್ಟಾಚಾರ, ಜಾತಿ ವ್ಯವಸ್ಥೆಯಲ್ಲಿ ಏನೂ ಬದಲಾಗಿಲ್ಲ. ಯಾಕೆ ಬದಲಾಗಿಲ್ಲ ಎಂದು ಪ್ರಶ್ನಿಸಿದರು.
ಈ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಧ್ಯಪ್ರವೇಶಿಸಿ, ಬಹುಶಃ ಅದೇ ನಿಂಬೆಹಣ್ಣನ್ನು ಸಿಎಂ ಯಡಿಯೂರಪ್ಪ ಅವರು ಮಾಜಿ ಸಚಿವ ರೇವಣ್ಣ ಅವರಿಗೆ ಕೊಟ್ಟಿರಬಹುದಾ? ಈ ಬಗ್ಗೆ ಅವರು ಸ್ವಲ್ಪ ಸ್ಪಷ್ಟನೆ ಕೊಡಲಿ ಎಂದು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈಗ ರೇವಣ್ಣ ಸದನದಲ್ಲಿ ಇಲ್ಲ. ಅವರು ಬಂದ ನಂತರ ಹೇಳಿ ಎಂದು ಸ್ಪೀಕರ್ ಸೂಚಿಸಿದರು. ಆಗ ರಮೇಶ್ ಕುಮಾರ್ ಅವರು, ಅಲ್ಲ ರೇವಣ್ಣ ಅವರಿಗೆ ನಿಂಬೆಹಣ್ಣು ಕೊಟ್ಟು ನೀವು ಮುಖ್ಯಮಂತ್ರಿ ಆಗಿಬಿಟ್ಟರಲ್ಲಾ ಎಂದರು.
ಈ ಸಂದರ್ಭದಲ್ಲಿ ಸದನ ನಗೆಗಡಲಲ್ಲಿ ತೇಲಿತು. ಸದನದಲ್ಲಿ ಇದ್ದರೂ ಸಿಎಂ ಯಡಿಯೂರಪ್ಪ ಅವರು ರಮೇಶ್ ಕುಮಾರ್ ಮಾತಿಗೆ ಪ್ರತಿಕ್ರಿಯಿಸಲಿಲ್ಲ. ಚರ್ಚೆ ಮುಂದುವರೆಸಿದ ಜಿ ಟಿ ದೇವೇಗೌಡ, ವೀರಶೈವರು ಅಂದರೆ ಬಿಜೆಪಿಯವರು, ಒಕ್ಕಲಿಗರು ಜೆಡಿಎಸ್ನವರು, ದಲಿತರು ಕಾಂಗ್ರೆಸ್ನವರು ಎಂಬ ಮಾತಿದೆ. ಯಡಿಯೂರಪ್ಪನವರಿಲ್ಲದೆ ಬಿಜೆಪಿ ಇಲ್ಲ. ದೇವೇಗೌಡರಿಲ್ಲದೆ ಜೆಡಿಎಸ್ ಇಲ್ಲ ಎಂಬ ಪ್ರತೀತಿ ಇದೆ ಎಂದರು. ಆಗ ಜಿ ಟಿ ದೇವೇಗೌಡರ ಮಾತಿಗೆ ಜೆಡಿಎಸ್‌ನ ಶಿವಲಿಂಗೇಗೌಡ ಆಕ್ಷೇಪಿಸಿ, ನನಗೆ ಒಕ್ಕಲಿಗರ ವೋಟು ಬಂದೇ ಇಲ್ಲ. ಆದರೂ ನಾನು ಗೆದ್ದಿಲ್ಲವೇ ಎಂದರು.
ಬಸವಣ್ಣರನ್ನು ಲಿಂಗಾಯತರಿಗೆ, ಅಂಬೇಡ್ಕರನ್ನು ದಲಿತ ಸಮುದಾಯಕ್ಕೆ, ಕನಕದಾಸರನ್ನು ಕುರುಬರ ಸಮುದಾಯಕ್ಕೆ ಮೀಸಲು ಮಾಡಲಾಗಿದೆ. ದಲಿತರು ದುರ್ಬಲರು ಕಾಂಗ್ರೆಸ್ ಎಂತಲೂ, ಒಕ್ಕಲಿಗರು ಜೆಡಿಎಸ್‌ಗೆ, ಲಿಂಗಾಯತರು ಬಿಜೆಪಿಗೆ ಅಂತಲೂ ಫಿಕ್ಸ್ ಮಾಡಲಾಗಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ಶಿವಲಿಂಗೇಗೌಡ, ನೀವ್ಯಾಕೆ ಜಾತಿಗಳನ್ನು ಪಕ್ಷಗಳಿಗೆ ಹೋಲಿಕೆ ಮಾಡುತ್ತೀರಾ, ಕೆ ಅರ್ ಪೇಟೆಯಲ್ಲಿ ಯಾಕೆ ಜೆಡಿಎಸ್ ಬರಲಿಲ್ಲ. ಹುಣಸೂರಿನಲ್ಲಿ ಯಾಕೆ ಬರಲಿಲ್ಲ?. ನನ್ನ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ಇಲ್ಲ. ಆದರೂ ನಾನು ಗೆದ್ದು ಬಂದಿದ್ದೇನೆ ಎಂದರು.
ಆಗ ಜಿಟಿಡಿ, ಹಾಗಾದರೆ ನೀವು ಜೆಡಿಎಸ್ನಲ್ಲಿ ಏಕಿದ್ದೀರಿ ಎಂದು ತಮ್ಮದೇ ಪಕ್ಷದ ಶಾಸಕ ಶಿವಲಿಂಗೇಗೌಡರ ಕಾಲೆಳೆದರು. ಇದೇ ಸಂದರ್ಭದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಹಾಡಿ ಹೊಗಳಿದ ಜಿಟಿಡಿ, ಸುರೇಶಕುಮಾರ್ ಸರ್ವ ಸಮರ್ಥ ಸಚಿವರಾಗಿದ್ದಾರೆ. ಮುಖ್ಯಮಂತ್ರಿಗಳು ಶಿಕ್ಷಣ ಇಲಾಖೆಗೆ ಹೆಚ್ಚು ಅನುದಾನ ನೀಡಬೇಕೆಂದರು.