ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಹಾಗೂ ಎಂಎಲ್‌ಸಿ ಲೆಹರ್ ಸಿಂಗ್ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಇಂದು ಭೇಟಿ ಮಾಡಿ ಕೆಲಕಾಲ ಸಮಾಲೋಚಿಸಿ ಲೆಹರ್ ಸಿಂಗ್ ತೆರಳಿದ್ದಾರೆ. ಇವರು ಭೇಟಿ ಮಾಡಿದ ಉದ್ದೇಶ ಹಾಗೂ ನಡೆಸಿದ ಮಾತುಕತೆ ಕುರಿತು ಈಗ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಲೆಹರ್ ಸಿಂಗ್ ಅವರು ಸಿಎಂ ಬಿಎಸ್‌ವೈ ಪರಮಾಪ್ತರಾಗಿದ್ದು, ತಮ್ಮ ಕಡೆಯಿಂದ ಯಾವುದಾದರೂ ಸಂದೇಶ ನೀಡಲು ಸಿಂಗ್ ಅವರನ್ನು ಕಳಿಸಿಕೊಟ್ಟಿದ್ದಾರಾ ಎಂಬ ಚರ್ಚೆ ನಡೆಯುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ವದ ಬದಲಾವಣೆಗಳು ನಡೆಯುತ್ತಿದ್ದು ಈ ಸಂದರ್ಭ ಲೆಹರ್ ಸಿಂಗ್ ಸಿದ್ದರಾಮಯ್ಯರನ್ನು ಯಾಕೆ ಭೇಟಿ ಮಾಡಿದರು? ಈ ಭೇಟಿಯ ಹಿಂದಿನ ಉದ್ದೇಶ ಏನು ಹಾಗೂ ಮುಂದಿನ ಬದಲಾವಣೆಗಳ ಕುರಿತು ಚರ್ಚೆಗಳು ಶುರುವಾಗಿವೆ.
ಎಲ್ಲವನ್ನೂ ಮೀರಿ ಇನ್ನೊಂದು ಹೊಸ ಕುತೂಹಲ ಮೂಡಿದ್ದು ಲೆಹರ್ ಸಿಂಗ್ ಬಿಜೆಪಿಯಲ್ಲಿ ಅಧಿಕಾರ ಸಿಗದೇ ಬೇಸರಗೊಂಡಿದ್ದು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ನ ಪ್ರಮುಖ ಶಕ್ತಿಯಾಗಿ ಸಿದ್ದರಾಮಯ್ಯ ಬೆಳೆದಿರುವ ಹಿನ್ನೆಲೆ ಅವರನ್ನು ಭೇಟಿ ಮಾಡಿ ತಮ್ಮ ಮನದಿಂಗಿತ ತಿಳಿಸಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.