ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ತಮ್ಮ ಪಕ್ಷದ ಚಿಹ್ನೆಯಾದ ಟ್ರ್ಯಾಕ್ಟರ್ನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಈ ವೇಳೆ ಮಾತಾನಾಡಿದ ಅವರು, ನಾನು ಶಾಸಕನಾದ್ರೆ ಕೇವಲ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕಲ್ಲ, ಇಡೀ ರಾಜ್ಯದ ಶಾಸಕ. ಕನ್ನಡಿಗರ ಪರವಾಗಿ ಹೋರಾಟ ಮಾಡುತ್ತೇನೆ ಎಂದ್ರು. ಅಲ್ಲದೇ, ಈ ಬಡಾವಣೆಗೆ ನಾನು ಹೊಸಬನಲ್ಲ. ರಾಜ್ಯಕ್ಕೂ ಹೊಸಬನಲ್ಲ. ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ ಅಲ್ಲಿ ವಾಟಾಳ್ ನಾಗಾರಾಜ್ ನಂಬರ್ ಒನ್ ಎಂದರು.
ಇವತ್ತು ಶಾಸನಸಭೆಗೆ ಪ್ರಾಮಾಣಿಕರು ಬರುತ್ತಿಲ್ಲ. ಕೇವಲ ಲೂಟಿಕೋರರು, ದರೋಡೆಕೋರರು ಬರುತ್ತಿದ್ದಾರೆ. ಆದ್ರೆ ಇಲ್ಲಿನ ಬಡಾವಣೆಯ ಜನರಿಗೆ ನನ್ನ ಹೋರಾಟದ ಬಗ್ಗೆ ಅಭಿಮಾನ ಇದೆ. ಮಹಾಲಕ್ಷ್ಮಿ ಲೇಔಟ್ ಗಂಡು ಮೆಟ್ಟಿದ ಕನ್ನಡಿಗರ ಕೋಟೆ. ಇಲ್ಲಿಗೆ ನನ್ನನ್ನು ಸೇವಕನಾಗಿ ಆರಿಸಲು ಜನರು ಅಭಿಮಾನ ಇಟ್ಟುಕೊಂಡಿದ್ದಾರೆ ಎಂದರು.