ಬೆಂಗಳೂರು: ವಿಧಾನ ಪರಿಷತ್ ಇತಿಹಾಸದಲ್ಲೇ ನಾಳೆ ವಿಶೇಷವಾದ ದಿನ. ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದ ಅಧಿವೇಶನ ನಾಳೆ ಸಮಾವೇಶಗೊಳ್ಳುತ್ತಿದೆ. ಈ ವಿಶೇಷ ಒಂದು ದಿನದ ಈ ಪರಿಷತ್ ಕಲಾಪ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಸಭಾಪತಿ ಮೇಲಿನ ಅವಿಶ್ವಾಸ ನಿರ್ಣಯ, ಗೋಹತ್ಯೆ ನಿಷೇಧ ವಿಧೇಯಕ ನಾಳಿನ ಕಲಾಪದಲ್ಲಿ ಮಂಡನೆಯಾಗುತ್ತಾ? ಅನ್ನೋದೇ ಎಲ್ಲರ ಕುತೂಹಲವಾಗಿದೆ.
ಸಭಾಪತಿ ಹಾಗೂ ಸರ್ಕಾರದ ಜಟಾಪಟಿಯ ಕಾರಣ ಅನಿರ್ದಿಷ್ಟವಾಧಿಗೆ ಮುಂದೂಡಿದ ಐದು ದಿನಗಳಲ್ಲಿಯೇ ನಾಳೆ ಮತ್ತೊಮ್ಮೆ ಒಂದು ದಿನದ ಪರಿಷತ್ ಅಧಿವೇಶನ ನಡೆಯಲಿದೆ. ನಾಳೆ ಒಂದು ದಿನ ನಡೆಯುವ ಈ ಅಧಿವೇಶನ ರಾಜಕೀಯ ಹಾವು ಏಣಿ ಆಟಕ್ಕೆ ವೇದಿಕೆಯಾಗಲಿದೆ. ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದ ಬಿಜೆಪಿ ಸದಸ್ಯರು ನಾಳೆ ಮತ್ತೆ ಅದೇ ವಿಚಾರ ಚರ್ಚೆಗೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಗೋಹತ್ಯಾ ನಿಷೇಧ ವಿಧೇಯಕ ಪರಿಷತ್ ನಲ್ಲಿ ಮಂಡನೆಯಾಗಬೇಕಿದ್ದು, ನಾಳೆ ಮತ್ತೆ ವಿಧೇಯಕದ ಮಂಡನೆಗೆ ಬಿಜೆಪಿ ಮುಂದಾದರೆ ಸದನದಲ್ಲಿ ಜೆಡಿಎಸ್ ನಡೆ ಕೂಡಾ ಮಹತ್ವ ಪಡೆದುಕೊಳ್ಳಲಿದೆ.
ಓದಿ: ಪರಿಷತ್ ಕಲಾಪ ಹಠಾತ್ ಮುಂದೂಡಿಕೆ ಕೆಟ್ಟ ಸಂಪ್ರದಾಯ: ಸಚಿವ ಮಾಧುಸ್ವಾಮಿ ಬೇಸರ
ಸರ್ಕಾರ ಮತ್ತು ಸಭಾಪತಿ ನಡುವಿನ ಮುಸುಕಿನ ಗುದ್ದಾಟದಲ್ಲಿ ಸರ್ಕಾರದ ಕೈ ಮೇಲಾಗಿದೆ. ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಳ್ಳುವ ಮುಂಚೆಯೇ ಕಲಾಪವನ್ನು ಸಭಾಪತಿಗಳು ಮುಂದೂಡಿದ್ರು, ರಾಜ್ಯಾಪಾಲರ ಬಳಿ ದೂರು ಕೊಂಡೊಯ್ದ ಬಿಜೆಪಿ ಸದಸ್ಯರು ಕಾನೂನಿನ ಲಾಭ ಪಡೆದು ಒಂದು ಹೆಜ್ಜೆ ಮುಂದೆ ಇದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಗಳ ನೆಪವೊಡ್ಡಿ ವಿಧಾನಸಭಾ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಆದರೆ, ಪರಿಷತ್ ಕಲಾಪವನ್ನು ಪೂರ್ವ ನಿಗದಿಯಂತೆ 15 ನೇ ತಾರೀಖಿನ ವರೆಗೂ ನಡೆಸಬೇಕಿತ್ತು. ಆದರೆ, ಸಭಾಪತಿ ಗಳ ಮೇಲಿನ ಅವಿಶ್ವಾಸ ನಿರ್ಣಯ ತೆಗೆದುಕೊಳ್ಳಲು ಬಿಜೆಪಿ ಪಟ್ಟು ಹಿಡಿದ ಹಿನ್ನೆಲೆ ಪರಿಷತ್ ಕಲಾಪವನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮುಂದೂಡಿದ್ರು. ಇದು ಬಿಜೆಪಿ ಸದಸ್ಯರನ್ನು ಕೆರಳುವಂತೆ ಮಾಡಿತ್ತು. ಕಲಾಪದ ನಡಾವಳಿ ಬಾಕಿ ಇರುವಂತೆಯೇ ಸದನವನ್ನು ಮುಂದೂಡಲಾಗಿದೆ ಅನ್ನೋದು ಬಿಜೆಪಿ ದೂರು.
ಮಸೂದೆ ಮಂಡಿಸದೇ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿ
ಕಳೆದ ಗುರುವಾರ ಸದನವನ್ನು ಮುಂದೂಡಿದಾಗ ಕಲಾಪದ ನಡಾವಳಿ ಪ್ರಕಾರ ಗೋ ಹತ್ಯಾ ನಿಷೇಧ ವಿಧೇಯಕ ಮಂಡಿಸಬೇಕಿತ್ತು. ಒಂದು ವೇಳೆ ಈ ವಿಧೇಯಕ ಮಂಡಿಸಿದರೆ ಸಂಖ್ಯಾಬಲದ ಕೊರತೆಯ ಕಾರಣದಿಂದಾಗಿ ಮಸೂದೆಗೆ ಅನುಮೋದನೆ ದೊರಕುವುದು ಸರ್ಕಾರಕ್ಕೆ ಅನುಮಾನ ಇದೆ. ಹಾಗಾಗಿಯೇ ಜಾಣತನದಿಂದ ಮಸೂದೆ ಮಂಡಿಸದೇ ಸುಗ್ರೀವಾಜ್ಞೆ ಮೂಲಕ ಕಾಯ್ದೆ ತರುವುದು ಸರ್ಕಾರದ ಲೆಕ್ಕಾಚಾರ. ಮತ್ತೊಂದು ಕಡೆ ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಪದಚ್ಯುತಿ ಗೊಳಿಸುವುದು ಬಿಜೆಪಿ ಲೆಕ್ಕಾಚಾರ. ಆದರೆ ತಾಂತ್ರಿಕವಾಗಿ ನೀವು ಕೊಟ್ಟ ನೋಟೀಸ್ ಸರಿಯಿಲ್ಲ ಅಂತಾ ಸಭಾಪತಿಗಳು ಅವಿಶ್ವಾಸ ನಿರ್ಣಯದ ಮೇಲಿನ ನೋಟೀಸ್ ಅನ್ನು ನಿರಾಕರಿಸಿದ್ದಾರೆ.
ನಾಳೆ ಸದನ ಆರಂಭವಾದಾಗ ಅಜೆಂಡಾ ಪ್ರಕಾರ ಬಾಕಿ ಉಳಿದಿರುವ ಗೋ ಹತ್ಯಾ ನಿಷೇಧ ವಿಧೇಯಕ ಮಂಡಿಸಲು ಸಭಾಪತಿಗಳು ಸೂಚಿಸಬಹುದು. ಇದಕ್ಕೆ ಬಿಜೆಪಿ ಒಪ್ಪದೇ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಒತ್ತಾಯ ಮಾಡಬಹುದು. ಗೋ ಹತ್ಯಾ ನಿಷೇಧ ವಿಧೇಯಕಕ್ಕೆ ಜೆಡಿಎಸ್ ಬೆಂಬಲ ಅನಿವಾರ್ಯ, ಹಾಗೇನಾದರೂ ಆದರೆ ಜೆಡಿಎಸ್ನ ಜಾತ್ಯತೀತ ನಿಲುವಿನ ಬಗ್ಗೆ ಪ್ರಶ್ನಿಸಲು ಕಾಂಗ್ರೆಸ್ ಗೆ ಒಂದು ಅಜೆಂಡಾ ಸಿಕ್ಕಂತೆ ಆಗುತ್ತದೆ. ಬಹುತೇಕ ಗೋಹತ್ಯಾ ನಿಷೇಧ ವಿಧೇಯಕ ನಾಳೆ ಚರ್ಚೆಗೆ ಬರೋದು ಡೌಟ್. ಸಭಾಪತಿಗಳ ಮೇಲೆ ಅವಿಶ್ವಾಸ ನಿರ್ಣಯ ಕೂಡಾ ಚರ್ಚೆಗೆ ಬರೋದು ಡೌಟ್. ಗದ್ದಲಗಳ ಮಧ್ಯೆ ಒಂದೆರಡು ಬಾರಿ ಕಲಾಪ ಮುಂದೂಡಿ ಅಂತಿಮವಾಗಿ ಮತ್ತೆ ಅನಿರ್ಧಿಷ್ಟ ಅವಧಿಗೆ ಕಲಾಪ ಮುಂದೂಡಿಕೆ ಆಗುವ ಸಾಧ್ಯತೆಗಳೇ ಹೆಚ್ಚು. ಸರ್ಕಾರ ಕೌನ್ಸಿಲ್ ಕಲಾಪ ನಡೆಸುವ ಉದ್ದೇಶ ಈಡೇರುತ್ತಾ ಅಥವಾ ಕೇವಲ ನಾಮಕೇವಾಸ್ತೆಗೆ ನಾಳೆಯ ಕಲಾಪ ಸೀಮಿತ ಆಗುತ್ತಾ? ಅನ್ನೋದೇ ಎಲ್ಲರ ಕುತೂಹಲ.