ಬೆಳಗಾವಿ/ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ಅಲ್ಲಿ ಮೇಲ್ಜಾತಿಗೆ ಮೀಸಲಾತಿ ಹೆಚ್ಚಿಸಲಾಗಿತ್ತು. ಆದರೆ ನಾವು ಎಸ್ಸಿ-ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಿಸಿದ್ದೇವೆ. ಹಾಗಾಗಿ ನಮಗೆ ಅಂತಹ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮೀಸಲಾತಿ ಹೆಚ್ಚಳವನ್ನು ಸಮರ್ಥಿಸಿಕೊಂಡರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 1956ರಲ್ಲಿ ಮೀಸಲಾತಿ ಘೋಷಿಸಲಾಗಿದೆ. ನಂತರದ ದಿನಗಳಲ್ಲಿ ಜನಸಂಖ್ಯೆ ಬೆಳೆಯುತ್ತಾ ಹೋಯಿತು. ಆದರೆ ಮೀಸಲಾತಿ ಜಾಸ್ತಿ ಆಗಲಿಲ್ಲ. ನ್ಯಾ.ನಾಗಮೋಹನ್ ದಾಸ್ ಸಮಿತಿ ಮೀಸಲಾತಿ ಹೆಚ್ಚು ಮಾಡಬೇಕು ಎಂದು ಶಿಫಾರಸು ಮಾಡಿತು. ಅದರಂತೆ ವರದಿಯನ್ನು ಕ್ಯಾಬಿನಟ್ನಲ್ಲಿಟ್ಟು ಚರ್ಚಿಸಿ ಸಂಪುಟದ ಒಪ್ಪಿಗೆ ಪಡೆದು ಸುಗ್ರೀವಾಜ್ಞೆ ಮೂಲಕ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈಗ ವಿಧಾನಸಭೆಯಲ್ಲಿ ಬಿಲ್ ಮಂಡಿಸಿದ್ದೇವೆ. ನಂತರ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುತ್ತೇವೆ ಎಂದರು.
ಸರ್ಕಾರದ ಉತ್ತರಕ್ಕೆ ತೃಪ್ತರಾಗದ ಸದಸ್ಯ ತಿಪ್ಪೇಸ್ವಾಮಿ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಮೀಸಲಾತಿ ಜಾಸ್ತಿ ಮಾಡಿದಾಗ ಸುಪ್ರೀಂ ಕೋರ್ಟ್ ಆ ಕಾಯ್ದೆಯನ್ನು ಹೊಡೆದುಹಾಕಿದೆ. ನೀವು ಇದಕ್ಕೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು. ಇಡಬ್ಲ್ಯುಎಸ್ ಬಗ್ಗೆ ಕೇಂದ್ರ ನಿರ್ಧಾರ ತೆಗೆದುಕೊಂಡಿದೆ, ಅಲ್ಲಿಗೆ ಮೀಸಲಾತಿ ಶೇ.50 ರಿಂದ 60ಕ್ಕೆ ಹೆಚ್ಚಾದಂತಲ್ಲವೇ? ಮೀಸಲಾತಿ ವಿಚಾರದಲ್ಲಿ ರಾಜಸ್ತಾನ, ಛತ್ತೀಸ್ಗಡ, ತಮಿಳುನಾಡು ಎಲ್ಲವನ್ನೂ ನೋಡಿದ್ದೇವೆ.
ಕಾನೂನಾತ್ಮಕವಾಗಿ ಬಿಗಿಯಾಗಬೇಕು ಎಂದು ನಾವು ವರದಿ ಪಡೆದು ಸುಗ್ರೀವಾಜ್ಞೆ ತಂದು ಶೆಡ್ಯೂಲ್ 9ಗೆ ಸೇರಿಸಲು ಪ್ರಯತ್ನಿಸಲು ಮುಂದಾಗಿದ್ದಾರೆ. ಇದರಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಇತರ ರಾಜ್ಯ ಮೇಲ್ಜಾತಿಗೆ ಮೀಸಲಾತಿ ಹೆಚ್ಚಿಸಿದ್ದರೆ ನಾವು ಮಾತ್ರ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿದ್ದೇವೆ ಇದನ್ನು ನೋಡಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ನಮಗೆ ಹಿನ್ನಡೆಯಾಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ: ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಅಮೃತ್ ಯೋಜನೆಯಡಿ 75 ಕ್ರೀಡಾಪಟುಗಳನ್ನು ದತ್ತು ಪಡೆದು ವಾರ್ಷಿಕ ತಲಾ 10 ಲಕ್ಷ ಹಣ ನೀಡಿ ಅಗತ್ಯ ಸೌಲಭ್ಯ ಮತ್ತು ತರಬೇತಿ ಕೊಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದರು.
ಕಲಾಪದಲ್ಲಿ ಸದಸ್ಯ ಹೆಚ್.ಎಸ್.ಗೋಪಿನಾಥ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಲಿಂಪಿಕ್ಸ್ಗೆ ಹೋಗುವವರಿಗೆ ನಾವು ತಲಾ 10 ಲಕ್ಷ ರೂ ಕೊಡುತ್ತಿದ್ದೇವೆ. ಕಳೆದ ಬಾರಿ 5 ಜನ ಹೋಗಿದ್ದವರಿಗೂ ನಾವು 10 ಲಕ್ಷ ರೂ ಕೊಟ್ಟಿದ್ದೇವೆ. ಪದಕ ಗೆಲ್ಲದೇ ಇದ್ದರೂ ನಾವು ಅವರಿಗೆ ರಾಜಭವನದಲ್ಲಿ 1 ಲಕ್ಷ ರೂ ಅನುದಾನ ಕೊಟ್ಟು ಪ್ರೋತ್ಸಾಹ ನೀಡಿದ್ದು, ಅಮೃತ ಯೋಜನೆಯಡಿ 75 ಮಕ್ಕಳ ದತ್ತು ಪಡೆದು ತಲಾ 10 ಲಕ್ಷ ರೂ ಕೊಟ್ಟು ತರಬೇತಿ ಕೊಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಬೇಕಾದ ತರಬೇತಿ, ಅಗತ್ಯ ಸೌಲಭ್ಯ ಕೊಡಲಾಗುತ್ತಿದೆ. ಈ ಮೂಲಕ ಒಲಿಂಪಿಕ್ಸ್ಗೆ ನಮ್ಮ ಕ್ರೀಡಾಪಟುಗಳು ತೆರಳುವಂತೆ ತಯಾರಿ ಮಾಡುವ ಕೆಲಸವಾಗುತ್ತಿದೆ ಎಂದರು.
ಗೊಲ್ಲ, ಕಾಡುಗೊಲ್ಲ ಸಮುದಾಯಕ್ಕೆ ಅನ್ಯಾಯ ಮಾಡಲ್ಲ: ಗೊಲ್ಲ ಸಮುದಾಯವನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಮತ್ತು ಅನುದಾನ ಹಂಚಿಕೆ ವಿಚಾರದಲ್ಲಿ ತಾರತಮ್ಯವಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎಂ.ನಾಗರಾಜ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗೊಲ್ಲ ಸಮುದಾಯವನ್ನು ಬುಡಕಟ್ಟು ಅಧ್ಯಯನ ಕೇಂದ್ರದ ವರದಿಯನುಸಾರ ಎಸ್ಟಿಗೆ ಸೇರಿಸುವ ಶಿಫಾರಸು ಮಾಡಲಾಗಿದೆ. 2022ರ ಫೆಬ್ರವರಿಯಲ್ಲಿಯೂ ಮತ್ತೆ ಕೇಂದ್ರಕ್ಕೆ ಮಾಹಿತಿ ಒದಗಿಸಲಾಗಿದೆ. ಗೊಲ್ಲ, ಕಾಡುಗೊಲ್ಲ ಎರಡೂ ಸಮುದಾಯದ ಮೀಸಲಾತಿ, ಅನುದಾನ ವಿಚಾರದಲ್ಲಿ ಸಮಸ್ಯೆ ಮಾಡುವುದಿಲ್ಲ. ಗೊಲ್ಲ, ಕಾಡುಗೊಲ್ಲರಿಗೂ ನ್ಯಾಯ ಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಲವ್ ಜಿಹಾದ್ ನಿಷೇಧಕ್ಕೆ ಯುಪಿ ಮಾದರಿ ಕಾನೂನು ತನ್ನಿ: ಪರಿಷತ್‌ನಲ್ಲಿ ಡಿ.ಎಸ್ ಅರುಣ್ ಒತ್ತಾಯ