ETV Bharat / state

Council Election: ವಿಧಾನಪರಿಷತ್​ ಚುನಾವಣೆಗೆ ಕೈ​ ಅಭ್ಯರ್ಥಿಗಳ ಘೋಷಣೆ; ಜಗದೀಶ್‌ ಶೆಟ್ಟರ್‌ಗೆ ಟಿಕೆಟ್‌ - ಸಚಿವ ಎನ್ ಎಸ್ ಭೋಸರಾಜು

ವಿಧಾನಪರಿಷತ್​ ಚುನಾವಣೆಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

legislative-council-election-congress-announced-candidates
Legislative Council Election : ವಿಧಾನಪರಿಷತ್​ ಚುನಾವಣೆ ..ಕಾಂಗ್ರೆಸ್​ ಅಭ್ಯರ್ಥಿಗಳ ಘೋಷಣೆ
author img

By

Published : Jun 19, 2023, 5:52 PM IST

Updated : Jun 19, 2023, 7:57 PM IST

ಬೆಂಗಳೂರು : ಮೂರು ಸ್ಥಾನಗಳಿಗೆ ನಡೆಯುತ್ತಿರುವ ವಿಧಾನಪರಿಷತ್​ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್​ನಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಎನ್.ಎಸ್. ಭೋಸರಾಜು ಹಾಗೂ ತಿಪ್ಪಣ್ಣಪ್ಪ ಕಮಕನೂರ್​ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮೂವರು ಕಾಂಗ್ರೆಸ್ ನಾಯಕರ ಹೆಸರು ಪ್ರಕಟಿಸಿದ್ದು, ಇವರು ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿ, ಬಳಿಕ ಸೋಲು ಕಂಡಿದ್ದ ಜಗದೀಶ್ ಶೆಟ್ಟರ್​ಗೆ ಪರಿಷತ್ ಟಿಕೆಟ್​ ನೀಡಲಾಗಿದೆ.

ವಿಧಾನಸಭೆ ಚುನಾವಣೆಗೂ ಮುನ್ನ ನಡೆದ ಬೆಳವಣಿಗೆಯಲ್ಲಿ ಬಿಜೆಪಿ ತೊರೆದಿದ್ದ ಬಾಬುರಾವ್‌ ಚಿಂಚನಸೂರು, ಆ‌ರ್. ಶಂಕರ್ ಮತ್ತು ಲಕ್ಷ್ಮಣ ಸವದಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ತೆರವಾದ ಮೂರು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಚಿಂಚನಸೂರ್ ಸದಸ್ಯತ್ವದ ಅವಧಿ 2024ರ ಜೂ.17 ವರೆಗೆ, ಶಂಕರ್ ಸದಸ್ಯತ್ವ 2026 ಜೂ.30ರ ವರೆಗೆ ಹಾಗೂ ಸವದಿ ಸದಸ್ಯತ್ವ ಅವಧಿ 2028ರ ಜೂನ್ 14ರವರೆಗೆ ಇತ್ತು. ಈ ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಅವಿರೋಧ ಆಯ್ಕೆ ನಿಶ್ಚಿತವಾಗಿದೆ. ಮಾಜಿ ಎಂಎಲ್​ಸಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪಕ್ಕಾ ಬೆಂಬಲಿಗ ಹಾಗೂ ಶಿಷ್ಯ ಎಂದೇ ಗುರುತಿಸಿಕೊಂಡಿರುವ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರ ಆಯ್ಕೆ ಅಚ್ಚರಿ ಮೂಡಿಸಿದೆ.

ಜೆಡಿಎಸ್‌ ಸ್ಪರ್ಧೆ ಇಲ್ಲ: ವಿಧಾನಪರಿಷತ್​ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ತಟಸ್ಥವಾಗಿರಲು ಜೆಡಿಎಸ್ ಪಕ್ಷ ಈಗಾಗಲೇ ನಿರ್ಧರಿಸಿದೆ. ವಿಧಾನಸಭೆಯಲ್ಲಿ ಕೇವಲ 19 ಶಾಸಕರ ಬಲವನ್ನು ಹೊಂದಿರುವ ಜೆಡಿಎಸ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುವುದು ಕಷ್ಟ ಎಂದು ಹೇಳಲಾಗಿದೆ.

ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಿನ್ನೆಲೆ ವಿಧಾನ ಪರಿಷತ್​ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಬಾಬುರಾವ್ ಚಿಂಚನಸೂರ್ ಮತ್ತು ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಲಕ್ಷ್ಮಣ್ ಸವದಿ ಅಥಣಿಯಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದರು. ಬಾಬೂರಾವ್ ಚಿಂಚನ್​ಸೂರು ಗುರುಮಟ್ಕಲ್​ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಆರ್. ಶಂಕರ್ ಪಕ್ಷೇತರ ಅಭ್ಯರ್ಥಿಯಾಗಿ ರಾಣೆಬೆನ್ನೂರಿನಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಸದ್ಯ ವಿಧಾನ ಪರಿಷತ್​ನಲ್ಲಿ ಬಿಜೆಪಿ ಸಂಖ್ಯಾಬಲ ಒಂದಿಷ್ಟು ಇಳಿಕೆಯಾಗಿದ್ದು, ಕಾಂಗ್ರೆಸ್ ಬಲ ಹೆಚ್ಚಾಗಲಿದೆ.

ಚುನಾವಣಾ ಪ್ರಕ್ರಿಯೆ: ವಿಧಾನ ಪರಿಷತ್​ ಮೂರು ಸ್ಥಾನಗಳ ಉಪಚುನಾವಣೆಗೆ ಜೂನ್ 13 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಜೂನ್ 20ರಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜೂನ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್​ 23ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ವಿಧಾನಸಭೆ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಮೂವರನ್ನು ಗೆಲ್ಲಿಸಿಕೊಳ್ಳುವುದು ಕಾಂಗ್ರೆಸ್​ಗೆ ಸುಲಭವಾಗಿದೆ. ಸೋಲುವುದು ಖಚಿತ ಎಂಬ ಹಿನ್ನೆಲೆ ಬೇರೆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.

ಜೂನ್ 30 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ವಿಧಾನಸಭಾ ಸದಸ್ಯರು ಮತ ಚಲಾಯಿಸುವ ಮೂಲಕ ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದ್ದು, ಜುಲೈ 4ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ : Legislative council Election : ವಿಧಾನಪರಿಷತ್ ಚುನಾವಣೆ .. ನಾಮಪತ್ರ ಸಲ್ಲಿಕೆ ಆರಂಭ

Last Updated : Jun 19, 2023, 7:57 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.