ಬೆಂಗಳೂರು : ಲಕ್ಕಿ ಅಲಿ ಆರೋಪದಿಂದ ನಾನು ಆಘಾತಕ್ಕೊಳಗಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಬಾಲಿವುಡ್ ಗಾಯಕ ಹಾಗೂ ನಟ ಲಕ್ಕಿ ಅಲಿ ತಮ್ಮ ಬೆಂಗಳೂರಿನ ಜಮೀನನ್ನು ಭೂ ಮಾಫಿಯಾ ಮೂಲಕ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕುಟುಂಬದ ಸದಸ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಸುಧೀರ್ ರೆಡ್ಡಿ ಅವರು ತಮ್ಮ ಪತ್ನಿ ರೋಹಿಣಿ ಸಿಂಧೂರಿ ಅವರ ಸಹಾಯದಿಂದ ಅತಿಕ್ರಮಣ ಮಾಡಿದ್ದಾರೆ ಎಂದು ದೂರಿದ್ದರು.
ಈ ಆರೋಪ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ರೋಹಿಣಿ ಸಿಂಧೂರಿ, ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ. ಸದ್ಯ ಲಕ್ಕಿ ಅಲಿ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ಇದ್ದು, ಈ ವಿಚಾರ ಸಬ್ ಜುಡೀಸ್ ಆಗಿದೆ ಎಂದು ತಿಳಿಸಿದ್ದಾರೆ.
ನಾನು ಲಕ್ಕಿ ಅಲಿಯವರನ್ನು ಒಬ್ಬ ಕಲಾವಿದರಾಗಿ ಗೌರವಿಸುತ್ತೇನೆ. ಆದರೆ ನ್ಯಾಯಾಲಯದಲ್ಲಿ ವಿಚಾರ ಇರುವ ಈ ಸಂದರ್ಭದಲ್ಲಿ ಇದು ಬೇಕಾಗಿರಲಿಲ್ಲ. ತನಗೆ ಮಸಿ ಬಳಿಯಲು, ಮಾನ ಹಾನಿ ಮಾಡಿ ಸಾರ್ವಜನಿಕರ ಅನುಕಂಪ ಗಿಟ್ಟಿಸಿಕೊಳ್ಳಲು ಈ ರೀತಿ ಮಾಡಲಾಗಿದೆ. ಹೀಗಾಗಿ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ರೋಹಿಣಿ ಸಿಂಧೂರಿ ಪತಿ ವಿರುದ್ಧ ದೂರು ಸ್ವೀಕಾರಕ್ಕೆ ನಿರಾಕರಣೆ ಆರೋಪ: ಪರಿಶೀಲಿಸಿ ಕ್ರಮವೆಂದ ಸಚಿವ ಆರಗ