ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರದ ಚಿಕ್ಕಗೊಲ್ಲರಹಟ್ಟಿ ರಾಮಮಂದಿರ ಬಡಾವಣೆಯ ನಿವಾಸಿ ದಲಿತ ಮಹಿಳೆ ರಂಗಮ್ಮ ಅವರ ಮೇಲೆ ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಉಮೇಶ್ ಹಾಗೂ ಇತರ ಬಿಜೆಪಿ ನಾಯಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ದೌರ್ಜನ್ಯ ನಡೆಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಮುಖ್ಯಸ್ಥರಾದ ಧರ್ಮಸೇನ ಅವರು ಆಗ್ರಹಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ರಂಗಮ್ಮ ಎಂಬುವವರು ಬಿಬಿಎಂಪಿ ವ್ಯಾಪ್ತಿಯ ವಾರ್ಡ್ 71ರಲ್ಲಿ ಪೌರಕಾರ್ಮಿಕರಾಗಿದ್ದಾರೆ. ಅವರ ಪುತ್ರ ನವೀನ್ ಕುಮಾರ್ ಎಂಬುವವರು ಈ ಮುನ್ನ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ಅಲ್ಲಿನ ಜನರು ಮಾಹಿತಿ ನೀಡಿದ್ದಾರೆ. ಆದರೆ, ಬಿಜೆಪಿಯಲ್ಲಿ ದಲಿತರಿಗೆ ನ್ಯಾಯ ಸಿಗುವುದಿಲ್ಲ ಎಂದು ಬೇಸತ್ತು ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರು ಪ್ರಚಾರಕ್ಕಾಗಿ ಭೇಟಿ ನೀಡಿದಾಗ, ತಾನು ಕೂಡ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡುವುದಾಗಿ ಹೇಳಿ ಅವರ ಜತೆ ಫೋಟೋ ತೆಗೆಸಿಕೊಂಡಿದ್ದ.
ಪ್ರಕರಣದ ನಂತರ ನೀರಿನ ಸಂಪರ್ಕ ಕಡಿತ: ಅವರು ಕಳೆದ 2 ವರ್ಷಗಳಿಂದ 30/30 ಅಡಿಯ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಮನೆ ಜಾಗ ಸಾಲುತ್ತಿಲ್ಲ ಎಂದು ಪಕ್ಕದಲ್ಲಿದ್ದ ಜಾಗದಲ್ಲಿ 8 ಅಡಿಯಲ್ಲಿ ಮನೆ ಕಟ್ಟಲು ಹೋದಾಗ, ಅದನ್ನು ಹೊಡೆದು ಹಾಕಿ ಅವರ ಮೇಲೆ ದೈಹಿಕವಾಗಿ ದಾಳಿ ನಡೆಸಿದ್ದಾರೆ. ಇವರ ಮನೆಗೆ ವಿದ್ಯುತ್, ನೀರಿನ ಸಂಪರ್ಕವಿದೆ. ಆದರೆ ಈ ಪ್ರಕರಣದ ನಂತರ ಅವರ ಮನೆಗೆ ನೀರಿನ ಸಂಪರ್ಕ ಕಡಿತಗೊಳಿಸಿದ್ದಾರೆ. ಕಾಂಗ್ರೆಸ್ ಸ್ಥಳೀಯ ನಾಯಕರು ಅಲ್ಲಿ ಹೋಗಿ ಮತ್ತೆ ಅವರ ಮನೆಗೆ ನೀರಿನ ಸಂಪರ್ಕ ಕಲ್ಪಿಸಿದ್ದಾರೆ.
ಈ ಕುಟುಂಬದ ಮೇಲಿನ ಸಿಟ್ಟಿಗೆ ಅವರು ವಾಸವಿರುವ ಮನೆಯನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ. ಈ ವಿಚಾರಗಳು ಮಾಧ್ಯಮಗಳಲ್ಲಿ ಪ್ರಕಟವಾದ ನಂತರ ಎಸ್ಪಿ ಅವರು ಪ್ರತಿಕ್ರಿಯೆ ನೋಡಿ, ಇದನ್ನು ನೋಡಲು ಅಸಹ್ಯವಾಗುತ್ತಿದೆ ಎಂದು ಈ ಪ್ರಕರಣದಲ್ಲಿ ಕೇಸು ದಾಖಲಿಸಲು ಸೂಚನೆ ನೀಡಿದ್ದಾರೆ. ಆದರೆ ಸ್ಥಳೀಯ ಠಾಣೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಖಂಡನೀಯ. ಇವರ ಮನೆ ಕೆಡವಲು ಮುಂದಾಗಿರುವ ಜೆಸಿಬಿಯನ್ನು ವಶಪಡಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸುತ್ತೇವೆ. ಈ ಪ್ರಕರಣದ ಎಂಟು ಆರೋಪಿಗಳು ದಲಿತ ಮಹಿಳೆ ಮೇಲೆ ದಾಳಿ ಮಾಡಿದ್ದು, ಇವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಸರ್ಕಾರ ಮಧ್ಯ ಪ್ರವೇಶಿಸಬೇಕು: ಮಾತೆತ್ತಿದರೆ ದಲಿತರ ರಕ್ಷಣೆ ಮಾಡುತ್ತೇವೆ ಎನ್ನು ಬಿಜೆಪಿ ಸರ್ಕಾರ ತಮ್ಮ ಶಾಸಕರ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂದು ನೋಡುತ್ತಿಲ್ಲ. ಅವರ ರಕ್ಷಣೆ ಮಾಡಲು ಆಗುತ್ತಿಲ್ಲ. ಈ ವಿಚಾರದಲ್ಲಿ ಶಾಸಕರು, ಸರ್ಕಾರ ಅವರು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು. ಅಲ್ಲಿನ ಶಾಸಕರು ಇಚ್ಚೀಚೆಗೆ ಸಾರ್ವಜನಿಕ ಸಭೆಯಲ್ಲಿ ತಾವು ಪಿಟ್ಬುಲ್ ಶ್ವಾನಗಳಂತೆ ಒಂದು ಸೈನ್ಯ ರಚನೆ ಮಾಡಿದ್ದು, ತಮ್ಮ ವಿರುದ್ಧ ಹೋದವರನ್ನು ಅವರ ಮೂಲಕ ನಿಭಾಯಿಸುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವಾ ಇಲ್ಲವೇ ಎಂದು ಬಿಜೆಪಿಯವರು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.
‘ಹಿಂದೆ ಬಳ್ಳಾರಿ ಹೇಗೆ ಗಣಿ ರೆಡ್ಡಿಗಳ ರಿಪಬ್ಲಿಕ್ ಆಗಿತ್ತೋ ಅದೇ ರೀತಿ ಯಲಹಂಕವನ್ನು ಇವರ ರಿಪಬ್ಲಿಕ್ ಆಗಿ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕು. ಈ ವ್ಯಾಪ್ತಿಯಲ್ಲಿ ಈ ಘಟನೆ ಜತೆಗೆ ಇನ್ನು ಅನೇಕ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿದ್ದು, ಈ ವ್ಯಾಪ್ತಿಯಲ್ಲಿರುವ ದೌರ್ಜನ್ಯ ನಡೆಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸುತ್ತೇವೆ ಎಂದರು.
ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಯ ಅವ್ಯವಹಾರ ಸಹಿಸಲ್ಲ: ಪ್ರತಾಪ್ ರೆಡ್ಡಿ ಎಚ್ಚರಿಕೆ