ಬೆಂಗಳೂರು : ಭಾರತ ಬೇರೆಯಲ್ಲ, ಮಹಾತ್ಮ ಗಾಂಧೀಜಿ ಬೇರೆಯಲ್ಲ. ಗಾಂಧೀಜಿಗೆ ಅವಮಾನ ಆಗುವಂತೆ ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ವಿಚಾರದಲ್ಲಿ ಸರ್ಕಾರ ಚಿಂತಿಸಲಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಎಚ್ಚರಿಕೆ ಕೊಟ್ಟರು.
ಗಾಂಧಿ ಭವನದಲ್ಲಿರುವ ಗಾಂಧಿ ಕುರಿತ ಪುಸ್ತಕಗಳನ್ನು ಯುವ ಜನರಿಗೆ ಆನ್ಲೈನ್ನಲ್ಲಿ ಓದುವ ಅವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಆರಂಭಿಸಲಾದ ಜಾಲತಾಣಕ್ಕೆ ಇಂದು ಸಚಿವರು ಚಾಲನೆ ನೀಡಿದರು. ನಂತರ ಪ್ರಾಸ್ತಾವಿಕ ಭಾಷಣದಲ್ಲಿ, ಗಾಂಧೀಜಿ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂಗತಿಗಳನ್ನು ಹಾಕುತ್ತಿರುವ ಕುರಿತು ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ವ್ಯಕ್ತಪಡಿಸಿದ ವಿಷಾದಕ್ಕೆ ಪ್ರತಿಕ್ರಿಯಿಸಿ, ದೇಶದ ಮೇಲೆ ಅಭಿಮಾನ ಇಲ್ಲದವರು ಈ ಕೆಲಸ ಮಾಡುತ್ತಾರೆ ಎಂದರು.
ಗಾಂಧೀಜಿ ಅವರನ್ನು ಅನುಸರಿಸುವುದು ಕಷ್ಟವೇನೂ ಇಲ್ಲ. ಸತ್ಯ ಹೇಳುವುದು, ಸರಳವಾಗಿರುವುದು, ಯಾರಿಗೂ ಹಿಂಸೆ ಮಾಡದಿರುವುದು, ಎಲ್ಲರನ್ನೂ ಸಮಾನರಾಗಿ ಕಾಣುವುದು ಇವುಗಳನ್ನು ಎಲ್ಲರೂ ಅನುಸರಿಸಬಹುದು ಎಂದು ಹೇಳಿದರು.
ಗಾಂಧಿ ಚಿಂತನೆಗಳನ್ನು ಯುವ ಸಮುದಾಯಗಳಿಗೆ ಡಿಜಿಟಲ್ ಮಾಧ್ಯಮಗಳ ಮೂಲಕ ತಲುಪಿಸುವ ಯೋಜನೆಗೆ ಗಾಂಧಿ ಭವನದೊಂದಿಗೆ ಸಹಕಾರ ನೀಡುತ್ತಿರುವ ಅಮೆರಿಕದ ಪಬ್ಲಿಕ್ ರಿಸೋರ್ಸ್‌ನ ಸ್ಥಾಪಕರು ಹಾಗೂ ಅಧ್ಯಕ್ಷ ಕಾರ್ಲ್ ಮಲಾಮಡ್ ಅವರು ತಾವು ಗಾಂಧಿ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಒದಗಿಸಿರುವ ಕುರಿತು ಹಾಗೂ ತಾವು ಗಾಂಧಿ ಅವರ ಮೇಲೆ ಹೊಂದಿರುವ ಅಭಿಪ್ರಾಯಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಮುರಿಗೆಪ್ಪ ಬರೆದಿರುವ 'ಅಹಿಂಸಾ ಪ್ರತಿಪಾದಕ ಹುತಾತ್ಮ ಮೈಲಾರ ಮಹಾದೇವ' ಕೃತಿಗೆ ಜಯಲಕ್ಷ್ಮಿ ಶ್ರೀನಿವಾಸಯ್ಯ ದತ್ತಿ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಸಿ.ನಾರಾಯಣಪ್ಪ, ಎಸ್.ವಿ.ಟಿ ಗುಪ್ತ, ಹೆಚ್.ಎಸ್.ಹನುಮಂತರಾವ್ ಮತ್ತು ರಘುನಾಥ್ ರಾವ್ ಎನ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹಮ್ಮದ್, ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್, ನವದೆಹಲಿಯ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯದ ಡೀನ್ ಲಾರೆನ್ಸ್ ಲಿಯಾಂಗ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾ.ಸೇ.ಯೋ.ನ ರಾಜ್ಯಾಧಿಕಾರಿಗಳಾದ ಪ್ರತಾಪ್ ಲಿಂಗಯ್ಯ, ಡಾ.ಹೋ.ಶ್ರೀನಿವಾಸಯ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಶಿಕೃಷ್ಣ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಎನ್.ಆರ್.ವಿಶುಕುಮಾರ್, ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಗೌರವ ಕೋಶಾಧ್ಯಕ್ಷ ಹೆಚ್.ಬಿ.ದಿನೇಶ್ ಸೇರಿದಂತೆ ಮತ್ತಿತರ ಗಣ್ಯರು ಮತ್ತು ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಜಯ ಕಾಲೇಜಿನ ವಿದ್ಯಾರ್ಥಿ ನಿತ್ಯಾನಂದ ಶರ್ಮ ಮತ್ತು ತಂಡ ಗಾಂಧಿ ಅವರ ಕುರಿತ ಗೀತೆಗಳನ್ನು ಹಾಡಿದರು.
ಇದನ್ನೂ ಓದಿ: ಗಾಂಧಿ ಅವಹೇಳನಕ್ಕೆ ಅವಕಾಶ ನೀಡಲ್ಲ, ಅವಹೇಳನ ಮಾಡಿದಲ್ಲಿ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ..!