ಬೆಂಗಳೂರು : ಮಕ್ಕಳು ಪರೀಕ್ಷೆಯ ಒತ್ತಡದಿಂದ ಹೊರ ಬಂದು ಆಸಕ್ತಿಯಿಂದ, ಖುಷಿಯಿಂದ ಪರೀಕ್ಷೆ ಬರೆಯಲು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಡೆದುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ. ಸಿ ನಾಗೇಶ್ ತಿಳಿಸಿದರು.
ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಣೆಗೆ ಕೈಗೊಂಡಿರುವ ಸಿದ್ಧತೆಗಳ ಕುರಿತು ವಿಡಿಯೋ ಕಾನ್ಫರೆನ್ಸ್ ನಡೆಸುವ ಮೂಲಕ ಮಾಹಿತಿ ಪಡೆದರು. ಜನವರಿ 27ರಂದು ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಮಕ್ಕಳು ಪಾಲ್ಗೊಂಡು ಪ್ರಧಾನಿಯೊಂದಿಗೆ ಪರೀಕ್ಷೆಯ ಕುರಿತು ಚರ್ಚೆ ನಡೆಸಲಿದ್ದಾರೆ. ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಣೆಗೆ ಶಾಲೆಗಳಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪರೀಕ್ಷೆ ಬರೆಯಲು ನೀಡುವ ಸಲಹೆ, ಸೂಚನೆ ಮಕ್ಕಳಿಗೆ ಉಪಯುಕ್ತ: ಆನ್‌ಲೈನ್ ಮೂಲಕ, ಪತ್ರಗಳ ಮೂಲಕ ಮಕ್ಕಳು, ಪಾಲಕರು ಕೇಳಿರುವ ಪ್ರಶ್ನೆಗಳಿಗೆ ಪ್ರಧಾನಿಯವರು ಉತ್ತರ ನೀಡುತ್ತಾರೆ. ಮಕ್ಕಳು ಧೈರ್ಯದಿಂದ, ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಬರೆಯಲು ನೀಡುವ ಸಲಹೆ, ಸೂಚನೆಗಳು ಮಕ್ಕಳಿಗೆ ಉಪಯುಕ್ತವಾಗಲಿವೆ ಎಂದು ಹೇಳಿದರು.
ಪ್ರಧಾನಿ ಅವರು ಕಾರ್ಯಕ್ರಮದಲ್ಲಿ ಉತ್ತರ ನೀಡಲಿದ್ದಾರೆ: ಪರೀಕ್ಷೆಯ ಕುರಿತಾಗಿ ಇರುವ ಪ್ರಶ್ನೆಗಳು, ಸಂಶಯಗಳನ್ನು ಕೇಳಲು https://www.mygov.in/ppc-2023/ ವೆಬ್‌ಸೈಟಿಗೆ ಭೇಟಿ ನೀಡಬಹುದಾಗಿದೆ ಎಂದ ಅವರು, ಆಯ್ದ ಪ್ರಶ್ನೆಗಳಿಗೆ ಪ್ರಧಾನಿಯವರು ಕಾರ್ಯಕ್ರಮದಲ್ಲಿ ಉತ್ತರ ನೀಡಲಿದ್ದಾರೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪ್ರಯೋಜನ ಪಡೆಯಲು ಶಾಲೆಗಳಲ್ಲಿ ಸ್ಕ್ರೀನ್ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಕ್ರಮದಲ್ಲಿ ಮಕ್ಕಳ ಪಾಲಕರು ಕೂಡ ಪಾಲ್ಗೊಳ್ಳಲು ಕೋರಬೇಕು ಎಂದು ತಿಳಿಸಿದರು.
ಓದಿ: ಮಂಗಳೂರು ಏರ್ ಪೋರ್ಟ್ನಿಂದ ದೇಶೀಯ ಪ್ರಯಾಣ ಇನ್ನು ದುಬಾರಿ !
ಪಾಲಕರು, ಶಿಕ್ಷಕರು ಕೂಡ ಆತಂಕಕ್ಕೆ ಒಳಗಾಗುತ್ತಾರೆ: ‘ಪರೀಕ್ಷೆಯ ಕುರಿತು ಮಕ್ಕಳು ಮಾತ್ರವಲ್ಲದೇ, ಪಾಲಕರು, ಶಿಕ್ಷಕರು ಕೂಡ ಆತಂಕಕ್ಕೆ ಒಳಗಾಗುತ್ತಾರೆ. ಪರೀಕ್ಷೆ ದಿನಗಳು ಹತ್ತಿರ ಬರುತ್ತಿದ್ದಂತೆ ಅವರಲ್ಲಿ ಆತಂಕ ಹೆಚ್ಚಾಗುತ್ತಲೇ ಹೋಗುತ್ತದೆ. ಹೀಗಾಗಿ, ಚೆನ್ನಾಗಿ ಓದಿಕೊಂಡಿರುವ ಮಕ್ಕಳು ಕೂಡ ಕೆಲವೊಮ್ಮೆ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಲು ವಿಫಲರಾಗುತ್ತಾರೆ.
ಶ್ರೀ ನರೇಂದ್ರ ಮೋದಿ ಸಲಹೆ ನೀಡಲಿದ್ದಾರೆ: ಪಾಲಕರು ಕೂಡ ತಮ್ಮ ಮಕ್ಕಳ ಮೇಲೆ ಒತ್ತಡ ಹೇರುವ ಕಾರಣ ಆತಂಕ, ಒತ್ತಡಕ್ಕೆ ಒಳಗಾಗುತ್ತಾರೆ. ಇಂತಹ ಸಮಸ್ಯೆಗಳಿಂದ ಹೊರ ಬಂದು ಮಕ್ಕಳು ಖುಷಿಯಿಂದ ಪರೀಕ್ಷೆ ಬರೆಯುವುದು ಹೇಗೆ? ಎಂಬ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ ಎಂದು ಅವರು ಹೇಳಿದರು.
ಓದಿ: ಸರ್ಕಾರದ ಜೊತೆಗೆ ಸೇರಿ ಖಾಸಗಿ ಆಸ್ಪತ್ರೆಗಳೂ ಉತ್ತಮ ಸೌಲಭ್ಯ ಕಲ್ಪಿಸಬೇಕು: ಶಾಸಕ ಹ್ಯಾರಿಸ್ ಪ್ರತಿಪಾದನೆ
ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಿತೇಶ್ ಕುಮಾರ್ ಸಿಂಗ್, ಆಯುಕ್ತರಾದ ಆರ್. ವಿಶಾಲ್ ಹಾಗೂ ಸಮಗ್ರ ಕರ್ನಾಟಕ ಯೋಜನಾ ನಿರ್ದೇಶಕರಾದ ಕಾವೇರಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಓದಿ: ರಾಜ್ಯದ 40 ಪರ್ಸೆಂಟ್ ಕಮಿಷನ್ ಬಗ್ಗೆ ಮೋದಿ ಮಾತನಾಡಬೇಕು: ಆಪ್ ಮುಖಂಡ ಬ್ರಿಜೇಶ್ ಕಾಳಪ್ಪ ಆಗ್ರಹ