ಬೆಂಗಳೂರು: ಲಾಕ್ಡೌನ್ ಅವಧಿ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲ ವಿಚಾರಣಾ ಹಾಗೂ ಜಿಲ್ಲಾ ನ್ಯಾಯಾಲಯಗಳಿಗೆ ಏ.14ರವರೆಗೆ ನೀಡಲಾಗಿದ್ದ ರಜೆಯನ್ನು ಏ.30ರವರೆಗೆ ವಿಸ್ತರಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಅದರಂತೆ ಏ.15ರಿಂದ ಏ.30ರವರೆಗೆ ಹೈಕೋರ್ಟಿನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಹಾಗೂ ಧಾರವಾಡದ ಸಂಚಾರಿ ಪೀಠಗಳು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ, ವಿಚಾರಣಾ, ಕೌಟುಂಬಿಕ, ಕಾರ್ಮಿಕ ನ್ಯಾಯಾಲಯಗಳು ಮತ್ತು ಕೈಗಾರಿಕಾ ನ್ಯಾಯಾಧೀಕರಣಗಳಿಗೆ ರಜೆ ಇರಲಿದೆ. ಆದರೆ, ತುರ್ತು ಪ್ರಕರಣಗಳ ವಿಚಾರಣೆಗಾಗಿ ಏ.16, 21, 24 ಮತ್ತು 28ಕ್ಕೆ ಹೈಕೋರ್ಟ್ ಪೀಠಗಳು ಕಲಾಪ ನಡೆಸಲಿವೆ.
ತುರ್ತು ಪ್ರಕರಣಗಳು ಇದ್ದಲ್ಲಿ ವಕೀಲರು ಮತ್ತು ಪಾರ್ಟಿ ಇನ್ ಪರ್ಸನ್ ಅರ್ಜಿದಾರರು ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ಇ-ಮೇಲ್ ಕಳುಹಿಸಿ ವಿಚಾರಣೆಗೆ ಮನವಿ ಮಾಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.