ಬೆಂಗಳೂರು: ಕಾನೂನು ಪದವಿ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
ವಿವಿ, ಕಾಲೇಜು ಪುನಾರಂಭವಾದ ಬಳಿಕ ಪರೀಕ್ಷೆ ದಿನಾಂಕ ನಿಗದಿ ಮಾಡುತ್ತೇವೆ. ಆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕು. ಕೊನೆ ಸೆಮಿಸ್ಟರ್ ಪರೀಕ್ಷೆ ಉತ್ತೀರ್ಣರಾದರೆ ಮಾತ್ರ ಅವರಿಗೆ ಡಿಗ್ರಿ ಸರ್ಟಿಫಿಕೇಟ್ ಸಿಗಲಿದೆ ಎಂದು ಸ್ಪಷ್ಟಪಡಿಸಿದರು. ಕಾನೂನು ಪದವಿ ಅಂತಿಮ ವರ್ಷದ ಪರೀಕ್ಷೆಗಳನ್ನು ಅಕ್ಟೋಬರ್ನಲ್ಲಿ ನಡೆಸುತ್ತೇವೆ. ಬಳಿಕ ಕೇಂದ್ರ ಸರ್ಕಾರ ಹೊರಡಿಸುವ ಅನ್‌ಲಾಕ್ ಮಾರ್ಗಸೂಚಿಯನ್ವಯ ಕಾಲೇಜು ಪುನಾರಂಭದ ನಿರ್ಧಾರ ಕೈಗೊಳ್ಳುತ್ತೇವೆ. ಬಳಿಕ ಪರೀಕ್ಷೆ ದಿನಾಂಕ ನಿಗದಿಗೊಳಿಸಲಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಅಂತಿಮ ವರ್ಷದ ಕಾನೂನು ಪರೀಕ್ಷೆಯನ್ನು ಆನ್ಲೈನ್ ಮಾಡುವ ಬಗ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸೂಚಿಸಿತ್ತು. ಈ ಸಂಬಂಧ ಅಂತಿಮ ವರ್ಷದ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಆದರೆ, ಹಲವು ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಪರೀಕ್ಷೆ ಮಾಡುವುದು ಬೇಡ ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಲಾಕ್ಡೌನ್ ಮಾರ್ಚ್ನಲ್ಲಿ ಆರಂಭವಾದ ಕಾರಣ 3 ತಿಂಗಳು ತರಗತಿಗಳು ನಡೆದಿಲ್ಲ. ಹಾಗಾಗಿ ಪರೀಕ್ಷೆಗಳನ್ನು ಮುಂದೂಡುತ್ತಿದ್ದೇವೆ. ಸೆಪ್ಟೆಂಬರ್ನಲ್ಲಿ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ. ಪ್ರಥಮ ವರ್ಷದಿಂದ ನಾಲ್ಕನೇ ವರ್ಷದ ಪರೀಕ್ಷೆಗಳನ್ನು ಅಕ್ಟೋಬರ್ ನಲ್ಲಿ ನಡೆಸಲು ತೀರ್ಮಾನಿಸಿದ್ದೇವೆ ಎಂದರು.