ಬೆಂಗಳೂರು: ಬೆಂಗಳೂರು ನವನಿರ್ಮಾಣ ಎಂಬ ನೂತನ ಪಕ್ಷವು ಬಿಬಿಎಂಪಿ ಆಡಳಿತದ ವಿರುದ್ಧ ಆನ್ಲೈನ್ ಅಭಿಯಾನ ಆರಂಭಿಸಿದೆ. ಪಾಲಿಕೆಯಲ್ಲಿ ಹತ್ತು ಸಾವಿರ ಕೋಟಿ ಬಜೆಟ್ ಮಂಡಿಸಿದ್ರೂ, 198 ಪಾಲಿಕೆ ಸದಸ್ಯರಿದ್ರೂ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಅಭಿಯಾದಲ್ಲಿ ಆರೋಪಿಸಲಾಗುತ್ತಿದೆ.
ಬಿಬಿಎಂಪಿ ಪ್ರತೀ ವರ್ಷ ಹತ್ತು ಸಾವಿರ ಕೋಟಿ ರೂಪಾಯಿ ಮೊತ್ತವನ್ನೂ ಮೀರಿ ಆಯವ್ಯಯ ಮಂಡಿಸುತ್ತಿದೆ. ಆದ್ರೆ ನಗರದ ಮೂಲಸೌಕರ್ಯಗಳು ಮಾತ್ರ ಅಭಿವೃದ್ಧಿಯಾಗದೆ ಹಾಗೇ ಇವೆ. ಎಲ್ಲೆಂದರಲ್ಲಿ ಕಸದ ರಾಶಿ, ರಾಜಕಾಲುವೆ ನಿರ್ವಹಣೆ ಕೊರತೆ, ರಸ್ತೆಗುಂಡಿ ಸಮಸ್ಯೆಗಳು ಹಾಗೆಯೇ ಇವೆ. ನಮ್ಮ ತೆರಿಗೆ ಹಣ ಎಲ್ಲಿ ಹೋಗುತ್ತಿದೆ, ನಮಗೆ ಲೆಕ್ಕ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ.
ಈ ರೀತಿ ಬೇಡಿಕೆ ಮುಂದಿಟ್ಟು #ಲೆಕ್ಕಕೊಡಿ, #ಆರ್ಟಿಐ ಹಾಕು ಎಂಬ ಆನ್ ಲೈನ್ ಅಭಿಯಾನಕ್ಕೆ ಸಾಕಷ್ಟು ಸಾರ್ವಜನಿಕರು ಸ್ಪಂದಿಸುತ್ತಿದ್ದಾರೆ. ಬಜೆಟ್ ಲೆಕ್ಕ, ಖರ್ಚುವೆಚ್ಚ ಕೇಳಿ ಆರ್ಟಿಐ ಹಾಕುವಂತೆ ನಾಗರಿಕರನ್ನು ಉತ್ತೇಜಿಸುವುದು ಹಾಗೂ ಬಿಬಿಎಂಪಿಯನ್ನು ಪಾರದರ್ಶಕ ಆಡಳಿತ ನಡೆಸುವಂತೆ ನೋಡಿಕೊಳ್ಳುವುದು ಈ ಅಭಿಯಾನದ ಉದ್ದೇಶ. ಅಲ್ಲದೆ ಇದೇ ತಿಂಗಳ ಕೊನೆಯಲ್ಲಿ ಪಾಲಿಕೆ ಆಡಳಿತ ಪ್ರಶ್ನಿಸಿ ಬೃಹತ್ ರ್ಯಾಲಿ ನಡೆಸಲು ನೂತನ ಪಕ್ಷ ನಿರ್ಧರಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಯರ್ ಗೌತಮ್ ಕುಮಾರ್, ಸಂಸದರು, ಶಾಸಕರು, ಪಾಲಿಕೆ ಸದಸ್ಯರ ಸಲಹೆ ಪಡೆದೇ ಬಜೆಟ್ ಮಾಡುವುದು. ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡುವ ಅಧಿಕಾರ ಇದೆ. ಕೆಲವೆಡೆ ಕಾಮಗಾರಿಗಳು ಕಳಪೆಯಾಗಿವೆ. ಸರಿಪಡಿಸಲಾಗುವುದು, ಮೂಲಭೂತ ಸೌಕರ್ಯ ನೀಡಲಾಗುವುದು ಎಂದರು.