ಗುರುಗ್ರಾಮ್: ಎರಡು ಮೂರು ತಿಂಗಳಿಂದ ಉಸಿರಾಡಲು ಸಾಧ್ಯವಾಗದೆ, ಸಮಸ್ಯೆ ಎದುರಿಸುತ್ತಿದ್ದ 25 ವರ್ಷದ ದೇವೇಶ್ ಶರ್ಮಾ ಎಂಬುವರ ಎದೆಗೂಡಿನ ತುಂಬ ಅನುಪಯುಕ್ತ ದೊಡ್ಡ ಗಡ್ಡೆ ಬೆಳೆದುಕೊಂಡಿತ್ತು. ಇದು ಶ್ವಾಸಕೋಶ ಹಾಗೂ ಹೃದಯದ ಸಾಮರ್ಥ್ಯವನ್ನು 90 ಭಾಗ ಕುಂಠಿತಗೊಳಿಸಿತ್ತು. ಇದನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಗುರುಗ್ರಾಮ್ ಫೋರ್ಟೀಸ್ ಆಸ್ಪತ್ರೆಗೆ ದಾಖಲಾದ ದೇವೇಶ್ ಅವರಿಗೆ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ಮಾಡಿ, 13.85 ಕೆ.ಜಿ ತೂಕದ ಗಡ್ಡೆಯನ್ನು ಹೊರತೆಗೆಯುವಲ್ಲಿ ನಗರದ ಫೋರ್ಟೀಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ.
ವಿಶ್ವದಲ್ಲೇ ಅತಿದೊಡ್ಡ ಎದೆಯ ಗಡ್ಡೆ ಇದಾಗಿದ್ದು, ನಾಲ್ಕು ಮಗು ತೂಗುವಷ್ಟು ತೂಕ ಇತ್ತು. ಇದನ್ನು ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ, ಹೊರತೆಗೆದು, ನಂತರವೂ ಸೂಕ್ಷ್ಮವಾಗಿ ನೋಡಿಕೊಂಡು ಗುಣಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಹಾಗೂ ಮುಖ್ಯಸ್ಥರಾದ ಡಾ. ಉದ್ಗೀತ್ ಧೀರ್ ತಿಳಿಸಿದ್ದಾರೆ.
ದೇವೇಶ್ ಅವರ ರಕ್ತದ ಗುಂಪು ಕೂಡಾ ಎಬಿ ಆಗಿದ್ದು, ರಕ್ತ ಹೆಚ್ಚು ನಷ್ಟವಾಗುವ ಆತಂಕ ಕೂಡಾ ಎದುರಾಗಿತ್ತು. ಹೃದಯದ ಭಾಗದಲ್ಲಿ ನಡೆಯುವ ಶಸ್ತ್ರಚಿಕಿತ್ಸೆಯಾದ ಕಾರಣ ಆರ್ಟಿಫಿಶಿಯಲ್ ಹಾರ್ಟ್ ಮಷಿನ್ ನ್ನು ಕೂಡಾ ಸಿದ್ಧಮಾಡಿ ಇಡಲಾಗಿತ್ತು ಎಂದು ಹೇಳಿದರು.
ದೇವೇಶ್ ಶರ್ಮಾ ಅವರಿಗೆ ಉಸಿರಾಟದ ತೊಂದರೆಯಾದ 2-3 ತಿಂಗಳ ಬಳಿಕ ಸಿಟಿ ಸ್ಕ್ಯಾನ್ ಮಾಡಿಸಿದಾಗ ಎದೆಗೂಡಿನಲ್ಲಿ ಶೇ.90 ರಷ್ಟು ಭಾಗ ಟ್ಯೂಮರ್ ಬೆಳೆದಿರುವುದು ಗೊತ್ತಾಯಿತು. ಇದು ವೈದ್ಯಲೋಕಕ್ಕೆ ಸವಾಲಿನ ಕೆಲಸ. ಏಕೆಂದರೆ ಟ್ಯೂಮರ್ ತೆಗೆಯಲು ಅರವಳಿಕೆ (ಅನಸ್ತೇಷಿಯಾ) ನೀಡುವುದರಿಂದ ಟ್ಯೂಮರ್ ನ ಭಾರ ಹೆಚ್ಚಾಗಿ ಹೃದಯ ಸಂಕುಚಿತಗೊಂಡು ರಕ್ತದೊತ್ತಡಕ್ಕೆ ಕಾರಣವಾಗ್ತದೆ. ಇದನ್ನು ನಮ್ಮ ತಂಡ ಜಾಗರೂಕತೆಯಿಂದ ನಡೆಸಿತು ಎಂದು ಮಾಹಿತಿ ನೀಡಿದರು.
ನಾಲ್ಕು ಗಂಟೆಯ ಶಸ್ತ್ರಚಿಕಿತ್ಸೆ ಬಳಿಕ 39 ದಿನಗಳ ಕಾಲ ಐಸಿಯು ನಲ್ಲಿ ಇರಬೇಕಾಯ್ತು. ಈ ವೇಳೆ ಮತ್ತಷ್ಟು ಆರೋಗ್ಯ ಸಮಸ್ಯೆ ಕಾಣಿಕೊಂಡಾಗ, ಇದನ್ನೂ ಯಶಸ್ವಿಯಾಗಿ ಗುಣಪಡಿಸಿ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯ ಉದ್ಗೀತ್ ಧೀರ್ ಮಾಹಿತಿ ನೀಡಿದ್ದಾರೆ.
ಈ ಹಿಂದೆ 2015 ರಲ್ಲಿ 9.5 ಕೆ.ಜಿ ತೂಕದ ಚೆಸ್ಟ್ ಟ್ಯೂಮರ್ ಅನ್ನು ಗುಜರಾತ್ ಆಸ್ಪತ್ರೆಯೊಂದರಲ್ಲಿ ತೆಗೆಯಲಾಗಿದ್ದು, ಇದು ವಿಶ್ವದಲ್ಲೇ ದೊಡ್ಡ ಟ್ಯೂಮರ್ ಎಂದು ಹೇಳಲಾಗಿತ್ತು. ಅಲ್ಲದೆ ಅದು ಫುಟ್ ಬಾಲ್ ಗಾತ್ರದಷ್ಟಿದೆ ಎಂದು ವೈದ್ಯರು ವಿವರಿಸಿದರು.