ಬೆಂಗಳೂರು : ನೈಸ್ ಸಂಸ್ಥೆಯಿಂದ ಟೌನ್ಶಿಪ್ಗೆ ವಶಪಡಿಸಿಕೊಳ್ಳಲಾದ ಭೂಮಿಯನ್ನು ರೈತರಿಗೆ ವಾಪಾಸು ಕೊಡಿಸಲು ಸಂಪುಟ ಉಪಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸಂಪುಟ ಉಪಸಮಿತಿ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, 26 ವರ್ಷಗಳ ಹಿಂದೆ ನೈಸ್ ಸಂಸ್ಥೆ ಮಾಡಿದ ಟೌನ್ ಶಿಪ್ ಗಾಗಿ ವಶಪಡಿಸಿಕೊಂಡಿದ್ದ 1,906 ಎಕರೆ ಜಮೀನಿಗೆ ಭೂ ಪರಿಹಾರ ಇನ್ನೂ ಇತ್ಯರ್ಥ ಆಗಿಲ್ಲ. 2013ರಲ್ಲಿ ಕೆಐಎಡಿಬಿಯವರು ರೈತರಿಗೆ ಹೊಸ ಭೂ ಪರಿಹಾರ ದರ ನಿಗದಿ ಮಾಡಿದ್ದರು.
ನಗರ ವ್ಯಾಪ್ತಿಯಲ್ಲಿ 1:2 ಮತ್ತು ಗ್ರಾಮಗಳ ವ್ಯಾಪ್ತಿಯಲ್ಲಿ 1:4 ಪರಿಹಾರ ಕೊಡಬೇಕು ಎಂದಾಗಿತ್ತು. ಕೆಐಎಡಿಬಿ ಪ್ರಕಾರ ಒಂದು ಎಕರೆಗೆ ಮೂರು ಕೋಟಿ ರೂ. ಮೇಲ್ಪಟ್ಟು ಪರಿಹಾರ ನೀಡಬೇಕು ಎಂದು ಲೆಕ್ಕ ಹಾಕಿದ್ದರು. ಆದರೆ ನೈಸ್ ಸಂಸ್ಥೆ 41 ಲಕ್ಷ ರೂ. ಮಾತ್ರ ಕೊಡುವುದಕ್ಕೆ ಒಪ್ಪಿಕೊಂಡಿದ್ದರು. ಆದರೆ ಇಂದು ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ರೈತರ ಪರವಾಗಿ ನಿಲ್ಲಲು ನಿರ್ಧಾರ ಮಾಡಲಾಗಿದೆ.
ನೈಸ್ ಸಂಸ್ಥೆ 1 ಎಕರೆ ಜಮೀನಿಗೆ 41 ಲಕ್ಷ ರೂ. ಪರಿಹಾರ ಕೊಡುವ ಪ್ರಸ್ತಾಪವನ್ನು ಒಪ್ಪುವುದಿಲ್ಲ. ಕೆಐಎಡಿಬಿನೇ 2013ರಲ್ಲಿ ನಿಗದಿ ಮಾಡಿದಂತೆ 1 ಎಕರೆಗೆ 3 ಕೋಟಿ ರೂ. ಮೇಲ್ಪಟ್ಟು ಪರಿಹಾರ ಹಣ ರೈತರಿಗೆ ನೀಡಬೇಕು. ಇಲ್ಲವಾದರೆ ನಿಯಮದಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿ ಟೌನ್ಶಿಪ್ಗೆ ವಶಪಡಿಸಲಾದ ಭೂಮಿಯನ್ನು ರೈತರಿಗೆ ವಾಪಸು ಕೊಡಿಸಲು ತೀರ್ಮಾನ ಮಾಡಲಾಗಿದೆ.
ಇಷ್ಟು ಸುದೀರ್ಘ ಅವಧಿಯಲ್ಲಿ ರೈತರಿಗೆ ಅನ್ಯಾಯವಾಗಿದೆ. ಇನ್ನು ಮುಂದೆ ಅನ್ಯಾಯವಾಗಬಾರದು ಎಂದು ಸಿಎಂ ಸೂಚಿಸಿದ್ದರು. 2013ರಲ್ಲಿ ನಿಗದಿಯಾದ ಪರಿಹಾರ ರೈತರಿಗೆ ಸಿಗಬೇಕು. ಒಂದು ವೇಳೆ ನೈಸ್ ಸಂಸ್ಥೆ ಪರಿಹಾರ ಕೊಡದಿದ್ದರೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿ, ರೈತರಿಗೆ ಅವರ ಭೂಮಿ ವಾಪಾಸು ಕೊಡಲು ತೀರ್ಮಾನ ಮಾಡುವಂತೆ ತಿಳಿಸಿದ್ದರು. ಅದರಂತೆ ಇಂದು ನಿರ್ಧಾರ ಕೈಗೊಳ್ಳಲಾಗಿದೆ. ಭೂ ಸ್ವಾಧೀನವಾದಾಗಿನಿಂದ ಇಲ್ಲಿವರೆಗೆ ಎಷ್ಟು ಮೊತ್ತವನ್ನು ರೈತರಿಗೆ ನೀಡಬೇಕು. ಅದನ್ನು ಬಡ್ಡಿ ಸಮೇತ ನಿಖರವಾಗಿ ಲೆಕ್ಕ ಹಾಕಿ ಎರಡು ದಿನದಲ್ಲಿ ವರದಿಯನ್ನು ಸಂಪುಟ ಸಭೆಗೆ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮೂರು ತಿಂಗಳ ಹಿಂದೆ ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು. ನಿಖರ ಅಂಕಿ ಅಂಶಗಳನ್ನು ಸಭೆಯ ಮುಂದಿಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಇಂದು ನಡೆದ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ರೈತರಿಗೆ ಅನ್ಯಾಯವಾಗದಂತೆ ಪರಿಹಾರ ಹಣ ನೀಡಲು ಒಪ್ಪದಿದ್ದರೆ, ನೈಸ್ ಸಂಸ್ಥೆ ವಶಪಡಿಸಿಕೊಂಡಿರುವ ಭೂಮಿಯನ್ನು ರೈತರಿಗೆ ವಾಪಸ್ ಕೊಡಲು ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಇದನ್ನೂ ಓದಿ : ಅಮಿತ್ ಶಾ ಬೆಂಗಾವಲು ವಾಹನದ ಹಿಂದೆ ಬೈಕ್‌ನಲ್ಲಿ ಬಂದ ಯುವಕರು; ಭದ್ರತಾ ವೈಫಲ್ಯ