ಬೆಂಗಳೂರು: 212ನೇ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವನ್ನು ವಿಶಿಷ್ಟವಾಗಿ ಆಯೋಜಿಸಲಾಗಿದೆ. ಗಾಜಿನ ಮನೆಯ ಮುಖ್ಯದ್ವಾರದ ಎಡಭಾಗದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಬಲಬದಿಯಲ್ಲಿ ಡಾ.ರಾಜ್ ಕುಮಾರ್ ಅವರ ಚಿನ್ನದ ಬಣ್ಣದ ಪ್ರತಿಮೆ ಸ್ಥಾಪಿಸಲಾಗಿದೆ.
ಅಪ್ಪ-ಮಗನ ಚಿಕ್ಕದಾದ ಪುತ್ಥಳಿಗಳು ಹೂವಿನ ಅಲಂಕಾರದೊಂದಿಗೆ ನೋಡುಗರನ್ನು ಆಕರ್ಷಿಸುತ್ತಿವೆ. ಪಕ್ಕಕ್ಕೆ ದೃಷ್ಟಿ ತಿರುಗಿಸಿದರೆ ಮಯೂರನಾಗಿದ್ದ ರಾಜ್‌ಕುಮಾರ್ ಪುತ್ಥಳಿ ಎದುರಾಗುತ್ತದೆ. ಇನ್ನೊಂದು ಬದಿಯಲ್ಲಿ ಪುನೀತ್ ಗಂಭೀರವಾಗಿ ಹೆಜ್ಜೆ ಹಾಕುತ್ತಿರುವ ಪುತ್ಥಳಿಯನ್ನು ನೋಡಬಹುದು.
ಮಂತ್ರಾಲಯದ ರಾಘವೇಂದ್ರ ಸ್ವಾಮಿಯಾಗಿ, ಬೇಡರ ಕಣ್ಣಪ್ಪನಾಗಿ ಡಾ.ರಾಜ್ ಕುಮಾರ್ ಶಿವಲಿಂಗದ ಮೇಲೆ ಕಾಲನ್ನಿಡುವ ದೃಶ್ಯ ಪುಷ್ಪಾಲಂಕೃತವಾಗಿದೆ. ಶಕ್ತಿಧಾಮವನ್ನು ಪುಷ್ಪದಲ್ಲಿ ನಿರ್ಮಿಸಿ ಅದರ ಮುಂದೆ ಪುನೀತ್ ಪುತ್ಥಳಿ ಇಡಲಾಗಿದೆ. ಡಾ. ರಾಜ್ ಮತ್ತು ಪುನೀತ್ ಅಭಿನಯಕ್ಕೆ ಸಾಕ್ಷಿಯಾಗಿದ್ದು ಭಕ್ತ ಪ್ರಹ್ಲಾದ ಚಿತ್ರ. ಈ ಸಿನಿಮಾದ ಕ್ಲೈಮ್ಯಾಕ್ಸ್ ಭಾಗವನ್ನು ಮರು ಸೃಷ್ಟಿಸಿರುವಂತೆ ಬಾಲ ಪುನೀತ, ರಾಜ್‌ಕುಮಾರ್, ಕಂಬ ಸೀಳಿಕೊಂಡು ಬರುವ ನರಸಿಂಹನ ಪ್ರತಿಮೆ ಜನರನ್ನು ಆಕರ್ಷಿಸುತ್ತಿದೆ.
ಡಾ.ರಾಜ್ ಕೃಷ್ಣದೇವರಾಯರಾಗಿ ಕುಳಿತುಕೊಳ್ಳವ ಶೈಲಿ ಮತ್ತು ಸುತ್ತಲೂ ಇರುವ ಹೂವಿನ ಅಲಂಕಾರ ಜನರನ್ನು ಮೂಕವಿಸ್ಮಿತರನ್ನಾಗಿಸಿದೆ. ಅಪ್ಪ-ಅಮ್ಮನ ಮಡಿಲಲ್ಲಿರುವ ಮುದ್ದು ರಾಜಕುಮಾರ ಇರುವುದು ಜನ ಇಷ್ಟ ಪಡುವಂತಿದೆ.
ಇದನ್ನೂ ಓದಿ: ಸರ್ಕಾರದಿಂದ ಸುವರ್ಣಾವಕಾಶ: ನೀವೇ 'ನಮ್ಮ ಕ್ಲಿನಿಕ್' ಲೋಗೋ ವಿನ್ಯಾಸ ಮಾಡಿ!