ಬೆಂಗಳೂರು : ಆಯೋಧ್ಯೆ ರಾಮ ಮಂದಿರ ಆಗೋಕೆ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿಯೇ ಕಾರಣ. ಅವರೇ ರಾಮಮಂದಿರ ಉದ್ಘಾಟನೆಗೆ ಬರಬಾರದು ಅಂದರೆ ಹೇಗೆ ಎಂದು ಮಾಜಿ ಡಿಸಿಎಂ ಲಕ್ಷಣ ಸವದಿ ಪ್ರಶ್ನಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು ಮೊದಲು ಹಿಂದೂ ಹಿಂದೂ ಎಂದು ಅಧಿಕಾರ ಬಂದ ಮೇಲೆ ನಾವು ಮುಂದು, ನೀವು ಹಿಂದೆ ಅಂತಾರೆ. ಅಡ್ವಾಣಿ ಅವರನ್ನೇ ಬರಬೇಡಿ ಅಂದರೆ ಸಿಎಂಗೆ ಆಹ್ವಾನ ಕೊಡದೇ ಇರೋ ವಿಷಯ ದೊಡ್ಡದು ಅಲ್ಲ. ರಾಮ ಮಂದಿರಕ್ಕಾಗಿ ಅಡ್ವಾಣಿ ರಥಯಾತ್ರೆ ಮಾಡಿದ್ದರು. ಆದರೆ ಅವರೇ ರಾಮ ಮಂದಿರ ಉದ್ಘಾಟನೆಗೆ ಬರಬಾರದು ಅಂತ ರಾಮ ಮಂದಿರ ಟ್ರಸ್ಟ್ ಸಂದೇಶ ಕೊಡೋದು ಎಷ್ಟು ಸರಿ ಎಂದರು.
ನಾನೂ ರಾಮ ಮಂದಿರಕ್ಕೆ 10 ಲಕ್ಷ ರೂ. ಕೊಟ್ಟಿದ್ದೇನೆ : ರಾಮ ಮಂದಿರ ಉದ್ಘಾಟನೆಗೆ ಸಿಎಂ, ಸಚಿವರಿಗೆ ಆಹ್ವಾನ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿದ ಸವದಿ, ರಾಮ ಮಂದಿರಕ್ಕೆ ಹಣ ಸಂಗ್ರಹ ಮಾಡುವಾಗ ಎಲ್ಲರೂ ನೆನಪು ಆದರು. ರಾಮ ಮಂದಿರ ನಿರ್ಮಾಣವಾದ ಮೇಲೆ ಯಾರೂ ನೆನಪಿಗೆ ಬರುವುದಿಲ್ಲ. ನಾನು ಕೂಡಾ ರಾಮ ಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ಕೊಟ್ಟಿದ್ದೇನೆ. ಸ್ಥಳೀಯ ಆರ್ಎಸ್ಎಸ್ ನಾಯಕರು ಹಣ ತೆಗೆದುಕೊಂಡು ಹೋಗಿದ್ದರು. ಆದರೆ ಈಗ ಯಾವುದಕ್ಕೂ ಅವರಿಗೇ ಆಹ್ವಾನ ನೀಡಿಲ್ಲ. ಬಿಜೆಪಿಯಲ್ಲಿ ಇತ್ತೀಚೆಗೆ ಒನ್ ಮ್ಯಾನ್ ಆರ್ಮಿ ರೀತಿ ಆಗಿದೆ ಎಂದು ಲಕ್ಷಣ್ ಸವದಿ ವಾಗ್ದಾಳಿ ನಡೆಸಿದರು.
ವಿಪಕ್ಷವಾಗಿ ಜನಪರ ಕೆಲಸ ಮಾಡಲಿ : ಕರ ಸೇವಕರ ಬಂಧನ ವಿಚಾರದ ಬಗ್ಗೆ ಮಾತನಾಡಿದ ಲಕ್ಷ್ಮಣ್ ಸವದಿ, ಈಗಾಗಲೇ ಗೃಹ ಸಚಿವರು ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈಗ ಇದಕ್ಕೆ ರಾಜಕೀಯ ಬಣ್ಣ ಬಳೆಯೋದು ಬೇಡ. ಹಳೆ ಕೇಸ್ ಆಗಿರುವುದರಿಂದ ಕ್ಲೋಸ್ ಮಾಡಬೇಕು ಅಂತ ಅದರ ಪ್ರಕ್ರಿಯೆ ಆಗುತ್ತಿದೆ. ಬಿಜೆಪಿ ಅವರಿಗೆ ಕೆಲಸ ಇಲ್ಲ. ಭಾವನಾತ್ಮಕ ವಿಚಾರ ತೆಗೆದುಕೊಂಡು ಸೃಷ್ಟಿ ಮಾಡಿ, ಬಣ್ಣ ಕಟ್ಟಿ ಈ ರೀತಿ ಮಾಡುತ್ತಾರೆ. ಇದರಿಂದ ಬಿಜೆಪಿ ಅವರಿಗೆ ಲಾಭ ಇಲ್ಲ. ಜನರಿಗೆ ಸಾಕಷ್ಟು ಸಮಸ್ಯೆ ಇದೆ. ಜನರಿಗೆ ಪರಿಹಾರ ಕೊಡಿಸುವುದರಲ್ಲಿ ಬಿಜೆಪಿ ಅವರು ಕೆಲಸ ಮಾಡಲಿ. ಭಾವನಾತ್ಮಕ ವಿಚಾರದಲ್ಲಿ ಹೊಟ್ಟೆ ತುಂಬಲ್ಲ. ಜನರ ಸಮಸ್ಯೆ ಬಗ್ಗೆ ಬಿಜೆಪಿ ಅವರು ವಿಪಕ್ಷವಾಗಿ ಕೆಲಸ ಮಾಡಲಿ. ಅದನ್ನು ಮಾಡಿದರೆ ಮುಂದೆ ಬಿಜೆಪಿ ಅವರಿಗೆ ಒಳ್ಳೆ ಅವಕಾಶ ಇದೆ ಎಂದರು.
ಇದನ್ನೂ ಓದಿ : ಬಾಲರಾಮನ ವಿಗ್ರಹ ಶಿಲೆ, ಶಿಲ್ಪಿ ನಮ್ಮ ಕರುನಾಡಿನ ಹೆಮ್ಮೆ: ಸುಬುಧೇಂದ್ರ ಶ್ರೀ