ಬೆಂಗಳೂರು: ಲಾಕ್ಡೌನ್ ಆದೇಶ ಹೊರಬಿದ್ದಾಗಿನಿಂದ ಒಂದೆಡೆ ಲಾಕ್ಡೌನ್ ನಿಯಮ ಪಾಲಿಸುವಂತೆ ಜನರಲ್ಲಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಕೆಲವರು ಮಾನವೀಯತೆಯಿಂದ ಬಡವರು ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಮುಂದಾಗಿದ್ದಾರೆ.
ಬೆಂಗಳೂರು ಉತ್ತರ ವಿಭಾಗ ವ್ಯಾಪ್ತಿಯ ಸುಬ್ರಮಣ್ಯನಗರ ಸಬ್ಇನ್ಸ್ಪೆಕ್ಟರ್ ಲತಾ ಅವರು ಪೊಲೀಸ್ ಕೆಲಸದ ಜೊತೆ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಠಾಣೆಯ ಮಹಿಳಾ ಪೇದೆಗಳ ತಂಡ ಕಟ್ಟಿ ಕೊಳೆಗೇರಿ ಪ್ರದೇಶಗಳಲ್ಲಿ ಮತ್ತು ಕಟ್ಟಡ ನಿರ್ಮಾಣ ಕೆಲಸಕ್ಕೆ ಬಂದಿರುವ ಮಹಿಳೆಯರನ್ನು ಗುರುತಿಸಿ ಅವರ ನೈರ್ಮಲ್ಯದ ದೃಷ್ಟಿಯಿಂದ ಸ್ಯಾನಿಟರಿ ಪ್ಯಾಡ್ಗಳನ್ನು ನೀಡಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಕೊಳಗೇರಿ ಪ್ರದೇಶದ ಜನರಿಗೆ ಯಾವ ರೀತಿ ಸ್ಯಾನಿಟರಿ ಪ್ಯಾಡ್ ಬಳಸಬೇಕು ಎಂಬುದರ ಬಗ್ಗೆಯೂ ತರಬೇತಿ ನೀಡುತ್ತಿದ್ದಾರೆ.
ಈಟಿವಿ ಭಾರತ ಲತಾ ಅವರ ಹಿನ್ನೆಲೆ ಕಲೆ ಹಾಕಿದಾಗ ಅವರು ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಸಬ್ ಇನ್ಸ್ಪೆಕ್ಟರ್ ಆಗಿರುವ ಲತಾ ಹಗಲು - ರಾತ್ರಿ ಠಾಣೆಯಲ್ಲೇ ದುಡಿಯಬೇಕಾದ ಪರಿಸ್ಥಿತಿಯಿದೆ. ಸದ್ಯಕ್ಕೆ ಲತಾ ಅವರಿಗೆ ಇಬ್ಬರು ಪುಟ್ಟ ಕಂದಮ್ಮಗಳಿದ್ದು, ಅವುಗಳನ್ನು ತನ್ನ ತಾಯಿ ಮನೆಯಲ್ಲಿ ಬಿಟ್ಟು ಬಂದಿದ್ದಾರೆ. ಏಕೆಂದರೆ ಲತಾ ಅವರು ಸ್ಲಂ ನಿವಾಸಿಗಳಿಗೆ ಮಾತ್ರ ಸಹಾಯ ಮಾಡ್ತ ಇಲ್ಲ. ಅದರ ಜೊತೆಗೆ ಕೊರೊನಾ ಸೋಂಕಿತ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಿ ಕೈಗೆ ಸೀಲ್ ಹಾಕುವ ಕೆಲಸದಲ್ಲಿ ಕೂಡ ನಿರತರಾಗಿದ್ದಾರೆ.
ಅನಗತ್ಯ ಓಡಾಟ ಮಾಡುವವರ ವಾಹನಗಳನ್ನ ಜಪ್ತಿ ಮಾಡೋದ್ರಲ್ಲಿ ತಮ್ಮನ್ನ ತೊಡಗಿಸಿಕೊಂಡಿರುವ ಇವರು ಲಾಕ್ಡೌನ್ ಅನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಸದ್ಯ ತನ್ನಿಂದಾಗಿ ಕುಟುಂಬಸ್ಥರಿಗೆ, ಮಕ್ಕಳಿಗೆ ಯಾವುದೇ ಸೋಂಕು ಬರುವುದು ಬೇಡವೆಂದು ಸಮಾಜದ ಸೇವೆಯಲ್ಲಿ ನಿರತರಾಗಿದ್ದಾರೆ. ಲತಾ ಅವರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.