ಬೆಂಗಳೂರು : ಲಾಕ್‌ಡೌನ್ ಹಿನ್ನೆಲೆ ಹೋಟೆಲ್‌ಗಳ ಆರಂಭಕ್ಕೆ ರಾಜ್ಯ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದ್ರೂ ಹೋಟೆಲ್ಗಳು ಕಾರ್ಯಾರಂಭ ಮಾಡಲು ಇನ್ನೂ ಮೀನಾಮೇಷ ಎಣಿಸುತ್ತಿವೆ.
ಹೋಟೆಲ್ ಉದ್ಯಮ ನಂಬಿದ ಜನರಿಗೆ ತೊಂದರೆಯಾಗಬಾರದು ಎಂದು ರಾಜ್ಯ ಸರ್ಕಾರ ಹೋಟೆಲ್‌ಗಳ ಪುನಾರಂಭಕ್ಕೆ ಅನುಮತಿ ನೀಡಿ 15 ದಿನ ಆಗಿದೆ. ಆದರೂ ಹೋಟೆಲ್ಗಳು ಇನ್ನೂ ಆರಂಭಗೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಟೇಕ್ ಅವೇ ವ್ಯವಸ್ಥೆ ಎನ್ನಲಾಗಿದೆ. ಟೇಕ್ ಅವೇ ಹೆಸರಿನಲ್ಲಿ ಸರ್ಕಾರ ಷರತ್ತು ವಿಧಿಸಿರುವ ಕಾರಣ ಹೋಟೆಲ್‌ಗಳಲ್ಲಿ ಪಾರ್ಸಲ್ ನೀಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ, ಪಾರ್ಸಲ್ ಕೊಂಡೊಯ್ಯುವವರ ಸಂಖ್ಯೆ ವಿರಳ, ಹೋಟೆಲ್ ಇರುವ ಕಡೆ ಹೋಗಿ ಬರಲು ಲಾಕ್‌ಡೌನ್ ಸಮಸ್ಯೆ ಇದೆ.
ಊಟ, ತಿಂಡಿ ಪಾರ್ಸಲ್ ತರಲು ಅಷ್ಟು ದೂರ ಹೋಗಿಬರುವುದು ಕಷ್ಟ. ಇನ್ನು ಇಡೀ ಕುಟುಂಬ ಮನೆಯಲ್ಲೇ ಇರುವ ಕಾರಣ ಮನೆಯಲ್ಲೇ ಬಗೆ ಬಗೆಯ ಅಡುಗೆ ಸಿದ್ದಪಡಿಸಲಾಗುತ್ತಿದೆ. ಹಾಗಾಗಿ, ಹೋಟೆಲ್ ಊಟಕ್ಕೆ ಬೇಡಿಕೆ ಕಡಿಮೆ ಎನ್ನಲಾಗುತ್ತಿದೆ. ಗ್ರಾಹಕರು ಹೋಟೆಲ್ ಕಡೆ ಸುಳಿಯಲ್ಲ ಎನ್ನುವುದು ಒಂದು ಸಮಸ್ಯೆಯಾದರೆ, ಹೋಟೆಲ್ ಕೆಲಸಗಾರರ ಕೊರತೆ ಮತ್ತೊಂದು ಸಮಸ್ಯೆ. ಬೆಂಗಳೂರಿನ ಹೋಟೆಲ್,ದರ್ಶಿನಿಗಳಲ್ಲಿ ಉತ್ತರ ಕರ್ನಾಟಕ ಭಾಗದ ಸಾಕಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಯುಗಾದಿ ಹಬ್ಬಕ್ಕೆ ಊರಿಗೆ ಹೋದವರು ಲಾಕ್‌ಡೌನ್‌ನಿಂದಾಗಿ ಅಲ್ಲಿಯೇ ಉಳಿದುಕೊಂಡಿದ್ದಾರೆ. ಇನ್ನೂ ಇಲ್ಲೇ ಇರುವ ಕೆಲಸಗಾರರನ್ನು ಪ್ರತಿ ದಿನ ಹೋಟೆಲ್‌ಗೆ ಕರೆತಂದು ಮತ್ತೆ ಮನೆಗೆ ಬಿಟ್ಟು ಬರಬೇಕಿದೆ. ಹಾಗಾಗಿ ಹೋಟೆಲ್ಗಳನ್ನು ಪ್ರಾರಂಭಿಸಲು ಮುಂದಾಗಿಲ್ಲ ಎನ್ನಲಾಗಿದೆ.
ತುರ್ತು ಸೇವೆ ಸಲ್ಲಿಸುವವರಿಗೆ ಆಹಾರ ಪೂರೈಕೆ : ಹೋಟೆಲ್ ಆರಂಭಿಸದೇ ಇದ್ದರೂ ತುರ್ತು ಸೇವೆ ಸಲ್ಲಿಸುವ ವಲಯಕ್ಕೆ ಸೀಮಿತವಾಗಿ ಬೇಡಿಕೆ ಅನುಸಾರ ಊಟ ಹಾಗೂ ತಿಂಡಿಯನ್ನು ಪಾರ್ಸಲ್ ಕಳುಹಿಸಿಕೊಡುವ ಕೆಲಸವನ್ನು ಹೋಟೆಲ್ ಉದ್ದಿಮೆದಾರರು ನಡೆಸುತ್ತಿದ್ದಾರೆ. ಆಯ್ದ ಕೆಲ ಹೋಟೆಲ್ ಹಾಗೂ ದರ್ಶಿನಿಗಳು ಬೇಡಿಕೆಯಂತೆ, ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಸಿವಿಲ್ ಡಿಫೆನ್ಸ್, ಮೆಟ್ರೋ ಸಿಬ್ಬಂದಿ ಸೇರಿ ತುರ್ತು ಸೇವೆ ಸಲ್ಲಿಸುತ್ತಿರುವವರಿಗೆ ಆಹಾರ ಸಿದ್ದಪಡಿಸಿ ಪೂರೈಕೆ ಮಾಡುತ್ತಿದ್ದಾರೆ.