ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಉರುಳಿದ ನೂರಾರು ಮರಗಳು, ರೆಂಬೆಗಳ ತ್ಯಾಜ್ಯ ವಿಲೇವಾರಿ ಮಾಡಲು ಬಿಬಿಎಂಪಿಯಲ್ಲಿ ವಾರ್ಡ್ ವಾಚ್ ಗಾರ್ಡ್ ಕೊರತೆ ಎದ್ದು ಕಾಣುತ್ತಿದೆ. ನಗರದ ವ್ಯಾಪ್ತಿಯಲ್ಲಿ ಮರಗಳಿಂದ ಟನ್ ಗಟ್ಟಲೇ ತ್ಯಾಜ್ಯ ಸೃಷ್ಟಿಯಾಗಿದ್ದು ಎರಡು, ಮೂರು ದಿನಗಳಿಂದ ಈ ತ್ಯಾಜ್ಯ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಲವು ಕಡೆಗಳಲ್ಲಿ ಪಾದಚಾರಿ ಮಾರ್ಗಗಳು ಬಂದ್ ಆಗಿದ್ದರೆ, ಕೆಲವೆಡೆ ನೀರು ನಿಂತಿದೆ. ಇನ್ನೂ, ಪುನಃ ಮಳೆಯಾದರೆ, ತ್ಯಾಜ್ಯವೂ ಒಳಚರಂಡಿ ಸೇರುವ ಆತಂಕವಿದೆ.
ಬಿಬಿಎಂಪಿಯ ಪ್ರತಿ ವಲಯಕ್ಕೂ ಒಬ್ಬೊಬ್ಬರಂತೆ 8 ಆರ್‌ಎಫ್‌ಓಗಳ ಅಗತ್ಯತೆ ಇದೆ. ಆದರೆ ಹಾಲಿ ಇರುವುದು ಕೇವಲ ಒಬ್ಬರೇ. ಅದೇ ರೀತಿ, ಎಂಟು ವಲಯಗಳ ಕೆಲಸ ಮಾಡುವ ತಂಡಗಳ ಉಸ್ತುವಾರಿಗೆ 28 ಉಪ ಆರ್‌ಎಫ್‌ಓಗಳು ಕಾರ್ಯ ನಿರ್ವಹಿಸಬೇಕಾಗಿದೆ. ಇದೀಗ ಇರುವುದು ಕೇವಲ 14 ಅಧಿಕಾರಿಗಳು 243 ವಾರ್ಡ್ ಗಳಿಗೆ ಕನಿಷ್ಠ ಒಬ್ಬರಂತೆ ಅರಣ್ಯ ಗಾರ್ಡ್ ಬೇಕು. ಆದರೆ, ಓರ್ವನೂ ಈ ಹುದ್ದೆಯಲ್ಲಿ ಇಲ್ಲದಿರುವುದು ಸಂಕಷ್ಟಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ, ಎಂಟು ವಲಯಗಳಿಗೆ ಮೇಲುಸ್ತುವಾರಿಗೆ ಆರ್‌ಎಫ್‌ಓಗಳು ಬೇಕು. ಈಗ ಇರುವುದು ಒಬ್ಬರು ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ಹೇಗೆ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಲು ಆಗಲಿದೆ ಎಂದು ಹಿರಿಯ ಅರಣ್ಯಾಧಿಕಾರಿ ಒಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇಂದೂ ಕೂಡ ನಗರದಲ್ಲಿ ಧಾರಾಕಾರ ಮಳೆ: ಎರಡ್ಮೂರು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರವಾಗಿ ಸುರಿದು ಮಳೆ ಭಾರಿ ಅವಾತರ ಸೃಷ್ಟಿ ಮಾಡಿದೆ. ಇಂದು ಕೂಡ ರಾತ್ರಿಯ ವೇಳೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಾಮರಾಜನಗರದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಕೊಡುಗು, ಶಿವಮೊಗ್ಗ, ಹಾಸನ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.
ಇದನ್ನೂ ಓದಿ:ಮುಂಗಾರು ಪೂರ್ವ ಮಳೆಗೆ ಕುಂದಾನಗರಿ ಜನ ತತ್ತರ: ಧಾರಾಕಾರ ಮಳೆಗೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು
ಜ್ಯುವೆಲ್ಲರಿ ಶಾಪ್‌ಗೆ ಮಳೆ ನೀರು ನುಗ್ಗಿದ್ದರಿಂದ ಕೊಚ್ಚಿ ಹೋದ ಚಿನ್ನಾಭರಣ: ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಬೆಂಗಳೂರು ನಗರದಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಮಲ್ಲೇಶ್ವರದ 9ನೇ ಕ್ರಾಸ್‌ನಲ್ಲಿ ನಿಹಾನ್ ಜ್ಯುವೆಲ್ಲರಿ ಅಂಗಡಿಗೆ ಮಳೆ ನೀರು ನುಗ್ಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಹೇಳಲಾಗುತ್ತಿದೆ. ಕಸ ಸಮೇತ ನೀರು ರಭಸವಾಗಿ ಒಳ ನುಗ್ಗಿದ್ದು ಅಲ್ಲಿದ್ದ ಸಿಬ್ಬಂದಿಗೆ ಅಂಗಡಿ ಶಟರ್ ಹಾಕಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಅಂಗಡಿ ಸಮೀಪ ನಡೆಯುತ್ತಿರುವ ಕಾಮಗಾರಿ ಈ ಅವಾಂತರಕ್ಕೆ ಕಾರಣವಾಗಿದೆ ಎಂದು ಅಂಗಡಿ ಮಾಲೀಕರು ದೂರಿದ್ದಾರೆ.
"ಅಂಗಡಿಯಲ್ಲಿದ್ದ ಚಿನ್ನಾಭರಣಗಳು ಒದ್ದೆಯಾಗಿವೆ. ಘಟನೆಯನ್ನು ಪಾಲಿಕೆಯವರಿಗೆ ಕರೆ ಮಾಡಿ ತಿಳಿಸಿ ಸಹಾಯ ಕೇಳಿದ್ದು, ಅಧಿಕಾರಿಗಳು ನಮ್ಮ ನೆರವಿಗೆ ಬಂದಿಲ್ಲ. ನಮಗೆ ಶೇ.80ರಷ್ಟು ಆಭರಣ ನಷ್ಟವಾಗಿದೆ. ನಮ್ಮ ಕಣ್ಮುಂದೆ ಸುಮಾರು 2 ಕೋಟಿ ರೂ ಮೌಲ್ಯದ ಆಭರಣಗಳು ಮಳೆ ನೀರಲ್ಲಿ ಕೊಚ್ಚಿಕೊಂಡು ಹೋಗಿವೆ" ಎಂದು ಮಳಿಗೆಯ ಒಡತಿ ಪ್ರಿಯಾ ಹೇಳಿದ್ದರು.