ಬೆಂಗಳೂರು: ಸರ್ಕಾರಿ ಅಭಿಯೋಜಕರ ಕೊರತೆ ಕ್ರಿಮಿನಲ್ ನ್ಯಾಯದಾನ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ ಹಾಗೂ ಪ್ರಕರಣಗಳಲ್ಲಿನ ಆರೋಪಿಗಳ ಶೀಘ್ರ ವಿಚಾರಣೆಯ ಹಕ್ಕು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ನಿರ್ದೇಶಿಸಿದೆ.
ರಾಜ್ಯದಲ್ಲಿ ಖಾಲಿ ಇರುವ ಪಬ್ಲಿಕ್ ಪ್ರಾಸಿಕ್ಯೂಟರ್ಸ್ಗಳ ಕೊರತೆ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, 2019ರ ಸೆಪ್ಟೆಂಬರ್ 27ರಿಂದ ನ್ಯಾಯಾಲಯ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ಕೊರತೆ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಕಾಲಕಾಲಕ್ಕೆ ನಿರ್ದೇಶಿಸುತ್ತಲೇ ಬರುತ್ತಿದೆ. ಈ ಸಂಬಂಧ ಗೃಹ ಇಲಾಖೆ ಕಾರ್ಯದರ್ಶಿ 12 ತಿಂಗಳ ಒಳಗೆ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಸರ್ಕಾರವೇ ಹೇಳಿದಂತೆ ಈಗಾಗಲೇ ಒಂದು ವರ್ಷ ಮುಗಿದು ಹೋಗಿದೆ. ಹೀಗಾಗಿ ಸರ್ಕಾರ ತಡ ಮಾಡದೆ ಪಿಪಿಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಸೂಚಿಸಿತು.
ಅಲ್ಲದೇ, ಪಬ್ಲಿಕ್ ಪ್ರಾಸಿಕ್ಯೂಟರ್ ಗಳು ಕೊರತೆಯಾದರೆ ಕ್ರಿಮಿನಲ್ ನ್ಯಾಯದಾನ ಪ್ರಕ್ರಿಯೆ ವಿಳಂಬವಾಗುತ್ತದೆ. ಅಷ್ಟೇ ಅಲ್ಲ, ಆರೋಪಿಗೆ ಸಂವಿಧಾನದ ವಿಧಿ 21ರ ಅಡಿ ಲಭ್ಯವಿರುವ ಶೀಘ್ರ ವಿಚಾರಣೆಯ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ ಖಾಲಿ ಇರುವ ಎಪಿಪಿ, ಸೀನಿಯರ್ ಎಪಿಪಿ ಹಾಗೂ ಪಿಪಿ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು.
ಸರ್ಕಾರ, ಸೀನಿಯರ್ ಪಬ್ಲಿಕ್ ಪ್ರಾಸಿಕ್ಯೂಟರ್ ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಾಗಿ ಹೇಳಿದೆ.ಆದರೆ ಖಾಲಿ ಇರುವ 254 ಹುದ್ದೆಗಳಲ್ಲಿ 205ಕ್ಕೆ ಅಷ್ಟೇ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಹೀಗಾಗಿ ಖಾಲಿ ಇರುವ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಪಿಹೆಚ್‌ಡಿ ವಿದ್ಯಾರ್ಥಿನಿಯಿಂದ ಲಂಚ ಸ್ವೀಕಾರ: ಮಂಗಳೂರು ವಿವಿ ಸಹಾಯಕ ಪ್ರೊಫೆಸರ್ಗೆ 5 ವರ್ಷ ಶಿಕ್ಷೆ