ಬೆಂಗಳೂರು: ನಗರದಲ್ಲಿ ಸ್ಥಾಪಿಸಲಾಗಿರುವ 8 ಸಿಇಎನ್ (ಸೈಬರ್, ಎಕನಾಮಿಕ್ಸ್ ಹಾಗೂ ನಾರ್ಕೋಟಿಕ್ ಅಪರಾಧ ಪ್ರಕರಣಗಳು) ವಿಶೇಷ ಪೊಲೀಸ್ ಠಾಣೆಗಳಿಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಕರ್ಯ ಒದಗಿಸಲು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ವಕೀಲೆ ಸುಧಾ ಕಾಟ್ವಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಫೆ.11ಕ್ಕೆ ಮುಂದೂಡಿತು.
ಇದನ್ನೂ ಓದಿ...ಕಡೂರು ಶಾಸಕ ಬೆಳ್ಳಿ ಪ್ರಕಾಶ್ ವಿರುದ್ಧ ಹೈಕೋರ್ಟ್ ಅಸಮಾಧಾನ
ಅರ್ಜಿದಾರರ ಪರ ವಾದಿಸಿದ ವಕೀಲ ಎಸ್.ಉಮಾಪತಿ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜರುಗುವ ಸೈಬರ್, ಎಕನಾಮಿಕ್ಸ್ ಹಾಗೂ ನಾರ್ಕೋಟಿಕ್ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಚಾರಣೆಗೆ ನಗರದ 8 ವಿಭಾಗಗಳಲ್ಲಿ ತಲಾ ಒಂದೊಂದು ಸಿಇಎನ್ ವಿಶೇಷ ಪೊಲೀಸ್ ಠಾಣೆಗಳನ್ನು 2020ರ ಜೂನ್ನಲ್ಲಿ ಸ್ಥಾಪಿಸಲಾಗಿದೆ. ಆದರೆ, ಈ ಪೊಲೀಸ್ ಠಾಣೆಗಳಿಗೆ ಈವರೆಗೂ ಸಮರ್ಪಕ ಸಿಬ್ಬಂದಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸಿಲ್ಲ. ಈ ಕೊರತೆ ನೀಗಿಸುವಂತೆ 2020ರ ಅ.21ಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ವಿವರಿಸಿದರು.
ಅರ್ಜಿದಾರರ ಕೋರಿಕೆ: ಪ್ರತಿ ಸಿಇಎನ್ ವಿಶೇಷ ಪೊಲೀಸ್ ಠಾಣೆಗೆ ಕನಿಷ್ಠ 30 ಮಂದಿ ಸಿಬ್ಬಂದಿಯನ್ನು ಒದಗಿಸಬೇಕು. ಆದರೆ, ಸದ್ಯ ನಿಯೋಜನೆ ಮೇರೆಗೆ ಒಂದೊಂದು ಠಾಣೆಗೆ 8 ರಿಂದ 10 ಸಿಬ್ಬಂದಿಯನ್ನು ಮಾತ್ರ ನೀಡಲಾಗಿದೆ. ಹೀಗಾಗಿ, ಸೈಬರ್, ಎಕನಾಮಿಕ್ಸ್ ಹಾಗೂ ನಾರ್ಕೋಟಿಕ್ ಪ್ರಕರಣಗಳನ್ನು ನಿರ್ವಹಿಸಬಲ್ಲ ವಿಷಯ ಪರಿಣಿತ ಸಿಬ್ಬಂದಿಯನ್ನು ಹಾಗೂ ಆಧುನಿಕ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.