ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಬಿಬಿಎಂಪಿಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಪಾಲಿಕೆ ಅಧಿಕಾರಿಗಳು ನಗೆಪಾಟಲಿಗೆ ಗುರಿಯಾಗಿದ್ದಾರೆ. ಸೆಪ್ಟೆಂಬರ್ನಲ್ಲಿ ತಡೆಯಾಜ್ಞೆ ಕೊಟ್ಟಿದ್ದರೂ ಬಿಬಿಎಂಪಿಗೆ ಉತ್ತರ ವಿಭಾಗ ತಹಶೀಲ್ದಾರ್ ಗಮನಕ್ಕೆ ತಂದಿರಲಿಲ್ಲ. ಇಂದು ಖುದ್ದಾಗಿ ಬಂದು ಕೊಟ್ಟಿದ್ದರಿಂದ. ತೆರವು ಕಾರ್ಯಾಚರಣೆ ಸ್ಥಗಿತ ಮಾಡಲಾಯಿತು.
ಇದೇ ತಿಂಗಳ 15 ರಂದು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಭಾಗಿಯಾಗಿದ್ದ ತಹಶೀಲ್ದಾರ್ ಇದರ ಬಗ್ಗೆ ಗಮನಕ್ಕೆ ತಾರದ ಕಾರಣ ಪಾಲಿಕೆ ಅಧಿಕಾರಿಗಳು ಮುಜುಗರಕ್ಕೆ ಈಡಾಗಿದ್ದಾರೆ. ಮಳೆಗಾಲದಲ್ಲಿ ಪ್ರವಾಹದ ಭೀತಿ ಉಂಟಾಗುವ ಕಾರಣ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ರಾಜ್ಯ ಸರ್ಕಾರ, ರಾಜಕಾಲುವೆ ಒತ್ತುವರಿದಾರರ ವಿರುದ್ಧ ಸಮರ ಸಾರಿದ್ದು, ಹಲವು ದಿನಗಳ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ, ಬುಲ್ಡೋಜರ್‌ಗಳು ಘರ್ಜಿಸಲು ಪ್ರಾರಂಭಿಸಿದ್ದವು.
ಈ ಹಿಂದೆ ಮಳೆ ನೀರಿನಿಂದ ಬೆಂಗಳೂರಿನ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗಿತ್ತು. ಜತೆಗೆ ರಾಜಕಾಲುವೆಗಳ ಒತ್ತುವರಿ ಪ್ರವಾಹ ಪರಿಸ್ಥಿತಿಗೆ ಮೂಲ ಕಾರಣವಾಗಿತ್ತು. ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದ್ದವು. ಹೀಗಾಗಿ, ಇದೀಗ ಹೊಸ ಸರ್ಕಾರ ರಾಜಕಾಲುವೆ ಮೇಲಿರುವ ಕಟ್ಟಡಗಳನ್ನು ಕೆಡವಲು ಜೆಸಿಬಿ ಯಂತ್ರಗಳು ಲಗ್ಗೆ ಇಟ್ಟಿದ್ದು, ಮಹದೇವಪುರ ಭಾಗದಿಂದಲೇ ಇಂದಿನಿಂದ ತೆರವು ಕಾರ್ಯಾಚರಣೆ ಶುರು ಮಾಡಿವೆ.
ಕಳೆದ ಕೆಲ ದಿನಗಳಿಂದ ರಾಜಕಾಲುವೆ ಜಾಗ ಒತ್ತುವರಿ ಮಾಡಿ ನಿರ್ಮಿಸಿದ್ದ ಕಾಂಪೌಂಡ್ ಹಾಗೂ ಖಾಲಿ ನಿವೇಶನಗಳನ್ನಷ್ಟೇ ತೆರವು ಮಾಡುತ್ತಿದ್ದ ಬಿಬಿಎಂಪಿ, ಇಂದು ಕಟ್ಟಡಗಳ ಮೇಲೆ ಮುಗಿ ಬಿದ್ದಿತ್ತು. ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜನರ ತೀವ್ರ ವಿರೋಧದ ಮಧ್ಯೆಯೇ ಮಹದೇವಪುರ ವಲಯದ ಹಲವು ಕಡೆ ಒತ್ತುವರಿ ತೆರವುಗೊಳಿಸಲು ಮುಂದಾದರು.
ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆಯ ಮಹಾದೇವಪುರ ವಲಯದ ಮುಖ್ಯ ಅಭಿಯಂತರ ಲೋಕೇಶ್ ಅವರು, ಮುನೇಕೊಳಲು ಪ್ರದೇಶದಲ್ಲಿ ತೆರವು ಮಾಡಲು ಬಂದಿದ್ದೆವು. ಕೆಆರ್ ಪುರದ ಹೊಯ್ಸಳ ನಗರದಲ್ಲಿ ತೆರವು ಮಾಡಲು ಅಂಗಡಿಗಳು ಸಮಯಾವಕಾಶ ಕೇಳಿದ್ದಾರೆ ಎಂದರು.
ಇಲ್ಲಿ ವಕೀಲರು ತಡೆಯಾಜ್ಞೆ ಇದೆ ಎಂದು ಪತ್ರ ತೋರಿಸಿದ್ದಾರೆ. ಅದನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಕೋರ್ಟ್ ಸ್ಟೇ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಸ್ಪೈಸ್ ಗಾರ್ಡ್ನನ್ ಸರ್ವೇ ನಂಬರ್ ಇದೆ ಎಂದು ಹೇಳ್ತಿದ್ದಾರೆ. ಕೆಲ ಗೊಂದಲಗಳಿದೆ, ಅದನ್ನು ಬಗೆಹರಿಸುತ್ತಿದ್ದೇವೆ. 22 ಕಡೆ ತೆರವು ನಡೆಸಲು ಗುರುತು ಮಾಡಿದ್ದೆವು, ಗೊಂದಲ ಬಗೆಹರಿದ ನಂತರ ತೆರವು ಮಾಡುತ್ತೇವೆ. ಯಾವುದೇ ಕಾರಣಕ್ಕೂ ಒತ್ತುವರಿದಾರರನ್ನು ಬಿಡುವುದಿಲ್ಲ ಎಂದು ಲೋಕೇಶ್ ಎಚ್ಚರಿಕೆ ನೀಡಿದರು.
ಒತ್ತುವರಿ ಹಿನ್ನೆಲೆ: ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ 840 ಕಿ ಮೀ ರಾಜಕಾಲುವೆ ಇದೆ. ವೃಷಭಾವತಿ, ಕೋರಮಂಗಲ, ಚೆಲ್ಲಘಟ್ಟ ವ್ಯಾಲಿ ಹಾಗೂ ಹೆಬ್ಬಾಳ ಕಣಿವೆ ಪ್ರಮುಖ ರಾಜಕಾಲುವೆಗಳಾಗಿವೆ.
415 ಕಿ.ಮೀ ಉದ್ದದ ಪ್ರಾಥಮಿಕ ಹಂತದ ಕಾಲುವೆ, 426 ಕಿ.ಮೀ ಉದ್ದದ ದ್ವಿತೀಯ ಹಂತದ ಕಾಲುವೆಯನ್ನು ಹೊಂದಿದೆ. ನಗರದಲ್ಲಿ ಉಂಟಾಗುವ ಪ್ರವಾಹ ನಿಯಂತ್ರಣ ಮಾಡುವ ಉದ್ದೇಶದಿಂದ 2016ರಲ್ಲಿ ಕಂದಾಯ ಇಲಾಖೆಯಿಂದ ಸಮೀಕ್ಷೆ ನಡೆದಿದ್ದು, 2,626 ಕಡೆ ರಾಜಕಾಲುವೆ ಒತ್ತುವರಿಗಳನ್ನು ಪತ್ತೆ ಮಾಡಲಾಗಿತ್ತು. ಈ ಪೈಕಿ 2016-17ನೇ ಸಾಲಿನಲ್ಲಿ 428, 2018-19ನೇ ಸಾಲಿನಲ್ಲಿ 1502 ಹಾಗೂ 2020ರಲ್ಲಿ 714 ಒತ್ತುವರಿ ಪ್ರಕರಣ ತೆರವು ಮಾಡಲಾಗಿದೆ.