ಬೆಂಗಳೂರು: ಇಂದು ಕಾಂಗ್ರೆಸ್ ಹೈಕಮಾಂಡ್ ರಾಜರಾಜೇಶ್ವರಿ ನಗರದಿಂದ ಕುಸುಮಾ ಹನುಮಂತರಾಯಪ್ಪ ಹಾಗೂ ಶಿರಾ ಕ್ಷೇತ್ರಕ್ಕೆ ಟಿ ಬಿ ಜಯಚಂದ್ರರನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ತಮ್ಮನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದ ಕುಸುಮಾ ಹನುಮಂತರಾಯಪ್ಪ ಧನ್ಯವಾದ ಸಲ್ಲಿಸಿದ್ದಾರೆ.

ಈ ಕುರಿತು ಫೇಸ್ಬುಕ್ನಲ್ಲಿ ತಮ್ಮ ಆಯ್ಕೆ ಬಗ್ಗೆ ಸಂತಸ ವ್ಯಕ್ತಪಡಿಸಿ ಧನ್ಯವಾದ ತಿಳಿಸಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ ನನ್ನ ತಂದೆ ಹನುಮಂತರಾಯಪ್ಪ ಅವರು ಮಾಡಿರುವ ಸೇವೆಯನ್ನು ಗುರುತಿಸಿ ನನಗೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದರಾದ ಡಿ.ಕೆ. ಸುರೇಶ್ ಹಾಗೂ ಪಕ್ಷದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಎಲ್ಲಾ ನಾಯಕರುಗಳಿಗೂ ಆಭಾರಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಕ್ಷೇತ್ರದ ಎಲ್ಲಾ ಮುಖಂಡರುಗಳ ಹಾಗೂ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ವಿಜಯ ಪತಾಕೆ ಹಾರುವಂತೆ ಮಾಡುವ ಜವಾಬ್ದಾರಿ ನನ್ನದು ಎಂದಿದ್ದಾರೆ ಕುಸುಮಾ.
ಸಂಭ್ರಮಿಸುವಂತೆ ಇಲ್ಲ
ನನ್ನ ದೊಡ್ಡಪ್ಪನವರು ಕೊರೊನಾದಿಂದಾಗಿ ಮೃತಪಟ್ಟಿರುವ ಕಾರಣ ಈ ಕ್ಷಣದಲ್ಲಿ ಪತ್ರಕರ್ತ ಮಿತ್ರರಿಗೆ ನೇರವಾಗಿ ಪ್ರತಿಕ್ರಿಯಿಸುವುದಕ್ಕಾಗಲೀ, ಕಾರ್ಯಕರ್ತರೊಂದಿಗೆ ಸಂಭ್ರಮಿಸಲು ಆಗುತ್ತಿಲ್ಲ. ಕ್ಷಮೆ ಇರಲಿ ಎಂದು ಕುಸುಮಾ ಎಫ್ಬಿಯಲ್ಲಿ ಬರೆದಿದ್ದಾರೆ.